ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್ ಮುಗಿದಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿದ ಭಾರತ ಪ್ರಶಸ್ತಿಗೆ ಮುತ್ತಿಟ್ಟಿತು. ಈ ತಂಡವನ್ನು ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಸದ್ಯ ಬಿಡುವಿನಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.
ಸೂರ್ಯಕುಮಾರ್ ಯಾದವ್ ಮಾರ್ಚ್ 14 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸ್ಕೈ ಮಾಡಿದ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಐದು ವರ್ಷದ ಕ್ರಿಕೆಟ್ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಭಾವುಕ ಪೋಸ್ಟ್ ಒಂದನ್ನು ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಕನಸು ಒಂದು ನನಸಾಗಿತ್ತು ಎಂದು ಬರೆದುಕೊಂಡಿದ್ದಾರೆ. ಅಂದು ಭಾರತ ತಂಡದ ಜೆರ್ಸಿ ತೊಟ್ಟಿರುವುದನ್ನು ಇಂದಿಗೂ ಸಂಪೂರ್ಣವಾಗಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ತಂಡದ ಪರ ಆಡಿದಾಗ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಭಾರತ ತಂಡ ತವರಿನಲ್ಲಿ ಟಿ20 ವಿಶ್ವಕಪ್ ಗೆಲುವು ಸಾಧಿಸಿದಾಗ ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದರು. ಟಿ20 ವಿಶ್ವಕಪ್‌ಗೆ ಆತಿಥ್ಯ ನೀಡಿದ್ದ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಸಾಧನೆಯನ್ನು ಸೂರ್ಯ ಪಡೆ ಮಾಡಿತು.
ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐ ಸಹ ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸೂರ್ಯಕುಮಾರ್ ಯಾದವ್ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಹೃದಯದಿಂದ ಧನ್ಯವಾದಗಳು. ನಿಮ್ಮ ಬೆಂಬಲ ಹಾಗೂ ಆಶೀರ್ವಾದದಿಂದ ಮಾತ್ರ ನಾವು ಅಸ್ತಿತ್ವದಲ್ಲಿದ್ದೇವೆ. ಈ ವಿಶ್ವಕಪ್ ಟ್ರೋಫಿ ಭಾರತಕ್ಕೆ ಸೇರಿದೆ" ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಭಾರತದ ಪರ ಒಟ್ಟು 37 ಏಕದಿನ ಪಂದ್ಯಗಳು, 113 ಟಿ20 ಪಂದ್ಯಗಳನ್ನು ಆಡಿದ್ದು, ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಟಿ20 ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸ್ಕೈ 36ರ ಸರಾಸರಿಯನ್ನು ಹೊಂದಿದ್ದು, 162ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಈ ವೇಳೆ 4 ಶತಕ ಹಾಗೂ 25 ಅರ್ಧಶತಕಗಳು ಸೇರಿವೆ. ಸೂರ್ಯಕುಮಾರ್ ಯಾದವ್ ಅವರು ಚುಟುಕು ಫಾರ್ಮೆಟ್‌ನಲ್ಲಿ 3272 ರನ್ ಕಲೆ ಹಾಕಿದ್ದಾರೆ. ಇವರು ಭಾರತದ ಪರ ಟಿ20 ಕ್ರಿಕೆಟ್‌ನ ಉತ್ತಮ ನಾಯಕರಲ್ಲಿ ಒಬ್ಬರು. ಟಿ20 ವಿಶ್ವಕಪ್‌ನಲ್ಲಿ ಸೂರ್ಯ ಭರ್ಜರಿ ಪ್ರದರ್ಶನ ನೀಡಿದ್ದು 242 ರನ್ ಸಿಡಿಸಿದ್ದಾರೆ. ಇವರು ಮಧ್ಯಮ ಕ್ರಮಾಂಕದ್ಲಲಿ ತಂಡಕ್ಕೆ ಆಧಾರವಾಗಿದ್ದ ಆಟಗಾರ.