ಬೆರಿಲ್ ಚಂಡಮಾರುತದಿಂದಾಗಿ ಮೂರು ದಿನಗಳ ಕಾಲ ಬಾರ್ಬಡೋಸ್‌ನಲ್ಲಿ ಸಿಲುಕಿದ್ದ ಭಾರತ ಕ್ರಿಕೆಟ್ ತಂಡ, ಅವರ ಕುಟುಂಬಗಳು ಮತ್ತು ಸಹಾಯಕ ಸಿಬ್ಬಂದಿ ಕೊನೆಗೂ ಗುರುವಾರ, ಜುಲೈ 4ರಂದು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಬುಧವಾರ ಮಧ್ಯಾಹ್ನ ಬಾರ್ಬಡೋಸ್‌ನಿಂದ ಹೊರಟು ಸುದೀರ್ಘ 16 ಗಂಟೆಗಳ ವಿಮಾನ ಪ್ರಯಾಣವನ್ನು ತೆಗೆದುಕೊಂಡ ನಂತರ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಗುರುವಾರ ಮುಂಜಾನೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.

ನಂತರ ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ 2024ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಸಂಭ್ರಮಾಚರಣೆಯನ್ನು ಹೊರಹಾಕಿದರು.
ಐಸಿಸಿ ಟಿ20 ವಿಶ್ವಕಪ್ 2024ರ ವಿಜೇತ ಭಾರತ ತಂಡವು ಐಟಿಸಿ ಮೌರ್ಯ ಹೋಟೆಲ್ ಸಿಬ್ಬಂದಿ ಮತ್ತು ಕಲಾ ತಂಡಗಳಿಂದ ಅದ್ಧೂರಿ ಸ್ವಾಗತವನ್ನು ಸ್ವೀಕರಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಹೋಟೆಲ್‌ನ ಹೊರಗೆ ತಮಟೆ ಸದ್ದಿಗೆ ಭರ್ಜರು ಸ್ಟೆಪ್ (ನೃತ್ಯ) ಹಾಕುತ್ತಿರುವುದು ಕಂಡುಬಂದಿದೆ.
ಈ ವೇಳೆ ಭಾರತೀಯ ಆಟಗಾರರನ್ನು ಹರ್ಷೋದ್ಗಾರ ಮತ್ತು ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು ಮತ್ತು ಟಿ20 ವಿಶ್ವಕಪ್ ವಿಜಯೋತ್ಸವವನ್ನು ಆಚರಿಸಲಾಯಿತು.

ಜೂನ್ 29ರಂದು ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುನಿನೊಂದಿಗೆ ಭಾರತ ತಂಡ ಎರಡನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು. ಈ ಮೂಲಕ ಒಟ್ಟಾರೆ ನಾಲ್ಕನೇ ವಿಶ್ವಕಪ್ ಟ್ರೋಫಿಯನ್ನು ಗುರುತಿಸುವ ಮೂಲಕ ಟೀಮ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ದುಃಖಕರವೆಂದರೆ, ಭಾರತ ತಂಡವು ಬಾರ್ಬಡೋಸ್‌ನಲ್ಲಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಬೇಕಾಯಿತು. ಏಕೆಂದರೆ, ಬೆರಿಲ್ ಚಂಡಮಾರುತದಿಂದ ಉಂಟಾದ ಸ್ಥಗಿತದಿಂದಾಗಿ ತವರಿಗೆ ಮರಳುವುದು ವಿಳಂಬವಾಯಿತು.
ಏರ್ ಇಂಡಿಯಾ ಚಾರ್ಟರ್ಡ್ ಫ್ಲೈಟ್‌ನಲ್ಲಿ ಸುರಕ್ಷಿತವಾಗಿ ನವದೆಹಲಿಗೆ ಬಂದಿಳಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರ ಬೆಳಿಗ್ಗೆ 11 ಗಂಟೆಗೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಈ ವೇಳೆ ಪ್ರಧಾನಿಯವರಿಂದ ಸನ್ಮಾನ ಸ್ವೀಕರಿಸಿ, ಉಪಹಾರ ಸೇವಿಸಲಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿಯಾದ ನಂತರ, 2024ರ ಟಿ20 ವಿಶ್ವಕಪ್ ಚಾಂಪಿಯನ್ ತಂಡ ನೇರವಾಗಿ ಮುಂಬೈಗೆ ಹಾರಲಿದೆ ಮತ್ತು ತೆರೆದ ಬಸ್ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಅದ್ಧೂರಿ ಮೆರವಣಿಗೆ ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.