ನವದೆಹಲಿ: ಟಿ20 ವಿಶ್ವಕಪ್ ಆರಂಭವಾಗಿದ್ದು, ಟೀಮ್ ಇಂಡಿಯಾ ಈ ವಿಶ್ವಕಪ್ ಮೇಲೆ ಕಣ್ಣು ನೆಟ್ಟಿದೆ. ಅಲ್ಲದೆ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆಸೆಯನ್ನು ಹೊಂದಿದೆ. ತವರಿನಲ್ಲಿ ಇನ್ನು ಯಾವುದೇ ತಂಡ ಚಾಂಪಿಯನ್ ಆಗಿಲ್ಲ. ಹೀಗಾಗಿ ಭಾರತ ಈ ಸಾಧನೆಯನ್ನು ಸಹ ಮಾಡುವ ಆಸೆ ಹೊಂದಿದೆ. ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಅಮೆರಿಕವನ್ನು 29 ರನ್‌ಗಳಿಂದ ಸೋಲಿಸಿದ, ಸೂರ್ಯ ಪಡೆ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಲೆಕ್ಕಾಚಾರವನ್ನು ಹೊಂದಿದೆ.
ಮೊದಲ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕಲು ವಿಫಲರಾದರೂ ಸಹ ಒಂದು ತುದಿಯಲ್ಲಿ ಸ್ಥಿರವಾಗಿ ಬ್ಯಾಟ್ ಮಾಡಿದ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದರು. ಇವರು 49 ಎಸೆತಗಳಲ್ಲಿ 84 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿ ಜಯದಲ್ಲಿ ಮಿಂಚಿದ್ದರು. ಇದೇ ಪ್ರದರ್ಶನವನ್ನು ಸೂರ್ಯ ಮುಂದುವರೆಸುವ ಪ್ಲ್ಯಾನ್ ಹೊಂದಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸೂರ್ಯ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರೆ, ವಿರಾಟ್ ಕೊಹ್ಲಿ ಒಂದು ದಾಖಲೆಯನ್ನು ಮೀರಿ ನಿಲ್ಲುವ ಅವಕಾಶವನ್ನು ಹೊಂದಿದ್ದಾರೆ.

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಯುಎಸ್‌ಎ ವಿರುದ್ಧ ಆಡಿದ ಧಾಟಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಯುಎಸ್‌ಎ ವಿರುದ್ದ ಅರ್ಧಶತಕ ಬಾರಿಸಿದ್ದ ಸೂರ್ಯ ವಿರಾಟ್ ಕೊಹ್ಲಿ ಅವರ ದಾಖಲೆಯ ಸಮಕ್ಕೆ ನಿಂತಿದ್ದರು. ತವರಿನಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ ಸೂರ್ಯ 14 ಬಾರಿ 50ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದಾರೆ. ವಿರಾಟ್ ಕೊಹ್ಲಿ ಸಹ ಇಷ್ಟೇ ಅರ್ಧಶತಕಗಳನ್ನು ಭಾರತದಲ್ಲಿ ಬಾರಿಸಿದ ಹಿರಿಮೆ ಹೊಂದಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸೂರ್ಯ ದೊಡ್ಡ ಇನಿಂಗ್ಸ್ ಕಟ್ಟಿದಲ್ಲಿ ವಿರಾಟ್ ದಾಖಲೆಯನ್ನು ಅಳಿಸಿ ಹಾಕಬಹುದು.
ಭಾರತದಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಮೂರನೇ ಬ್ಯಾಟರ್ ಎಂಬ ಕೀರ್ತಿ ಕೆಎಲ್ ರಾಹುಲ್ ಅವರಿಗೆ ಸಲ್ಲುತ್ತದೆ. ರಾಹುಲ್ 12 ಅರ್ಧಶತಕಗಳನ್ನು ತವರಿನಲ್ಲಿ ಸಿಡಿಸಿದ್ದಾರೆ. ಇನ್ನು ರೋಹಿತ್ ಶರ್ಮಾ (10), ಇಶಾನ್ ಕಿಶನ್ (8) ನಂತರದ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಈ ವರೆಗೆ 105 ಪಂದ್ಯಗಳನ್ನು ಆಡಿದ್ದು 37ರ ಸರಾಸರಿಯಲ್ಲಿ 3114 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 25 ಅರ್ಧಶತಕಗಳು ಸೇರಿವೆ. ಭಾರತದಲ್ಲಿ ಆಡಿದ 44 ಪಂದ್ಯಗಳಲ್ಲಿ ಸೂರ್ಯ 39ರ ಸರಾಸರಿಯಲ್ಲಿ 1404 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 13 ಅರ್ಧಶತಕಗಳು ಸೇರಿವೆ.
ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಸೂರ್ಯ, ಆಟಗಾರರ ವೈಯಕ್ತಿಕ ಸಾಧನೆಗಳಿಗಿಂತ ತಂಡದ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ. ಇದರ ನೇರ ಪರಿಣಾಮ ಫಲಿತಾಂಶದ ಮೇಲೆ ಬೀಳುತ್ತದೆ. ಕಳೆದ ಕೆಲವು ವರ್ಷದಲ್ಲಿ ಭಾರತ ಸಂಘಟಿತ ಆಟದ ಪ್ರದರ್ಶನ ನೀಡಿದೆ. ತಂಡವು ಅನಗತ್ಯ ಒತ್ತಡ ಹಾಗೂ ಆಲೋಚನೆಗೆ ಬಲಿಯಾದರೆ, ತೊಂದರೆಗಳು ಉಂಟಾಗಬಹುದು. ಪ್ರಸ್ತುತ ಭಾರತೀಯ ತಂಡವು ಮಾನಸಿಕವಾಗಿ ಬಲಿಷ್ಠವಾಗಿದೆ. ಇತ್ತೀಚಿನ ದಿನಗಳಲ್ಲಿ ತಂಡ ನೀಡಿದ ಪ್ರದರ್ಶನವನ್ನೇ ಮುಂದುವರೆಸಿದರೆ ಪ್ರಶಸ್ತಿ ಉಳಿಸಿಕೊಳ್ಳಬಹುದು ಎಂದು ಸೂರ್ಯ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಲೀಗ್ ಹಂತದ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಫೆಬ್ರವರಿ 15 ರಂದು ಆಡಲಿದೆ. ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸೂರ್ಯ ಪಡೆ ಸಹ ಈ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದೆ.