ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಸೂರ್ಯಕುಮಾರ್ ಯಾದವ್ ಪಡೆ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಆದರೆ ಟೀಮ್ ಇಂಡಿಯಾಗೆ ಆ ಇಬ್ಬರು ಆಟಗಾರರ ಫಾರ್ಮ್ ಚಿಂತೆಯನ್ನು ಹೆಚ್ಚಿಸಿದೆ. ಈ ಸ್ಟಾರ್ ಪ್ಲೇಯರ್‌ಗಳು ಮೂರನೇ ಟಿ20 ಪಂದ್ಯದಲ್ಲೂ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರ ಕಳಪೆ ಫಾರ್ಮ್ ಗಂಭೀರ್ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದೆ.
2026ರಲ್ಲಿ ಭಾರತ ಹಾಗೂ ಶ್ರೀಲಂಕಾ ದೇಶಗಳು ಟಿ20 ವಿಶ್ವಕಪ್ ಆಯೋಜಿಸುತ್ತವೆ. ಈ ವಿಶ್ವಕಪ್ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಬಾಕಿ ಉಳಿದಿರುವ ಕೆಲವೇ ಕೆಲವು ಪಂದ್ಯಗಳಲ್ಲಿ ತನ್ನ ಪ್ಲೇಯಿಂಗ್ ಇಲೆವೆನ್ ಪಕ್ಕಾ ಮಾಡಬೇಕಿದೆ. ತಂಡದಲ್ಲಿ ಸ್ಥಾನ ಪಡೆದಿರುವ ಪ್ರತಿಯೊಬ್ಬ ಆಟಗಾರ ತನ್ನ ಕೈಲಾದ ಕಾಣಿಕೆಯನ್ನು ನೀಡುತ್ತಿದ್ದಾನೆ. ಆದರೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಶುಭಮನ್ ಗಿಲ್ ಮಾತ್ರ ರನ್ ಬರವನ್ನು ಅನುಭವಿಸುತ್ತಿದ್ದಾರೆ.

ಈ ಇಬ್ಬರೂ ಸ್ಟಾರ್ ಆಟಗಾರರ ಮೇಲೆ ಧರ್ಮಶಾಲಾದಲ್ಲಿ ದೊಡ್ಡ ಇನಿಂಗ್ಸ್ ಕಟ್ಟಬಹುದು ಎಂಬ ವಿಶ್ವಾಸವಿತ್ತು. ಆದರೆ ಈ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡುವಲ್ಲಿ ಎಡವಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಹಳೆಯ ಸ್ಫೋಟಕ ಬ್ಯಾಟಿಂಗ್ ನೆನಪು ಹಾರಿದಂತೆ ಕಾಣುತ್ತಿದೆ. ಇವರ ಕ್ರಮಾಂಕದಲ್ಲಿ ಪದೇ ಪದೇ ಆಗುತ್ತಿರುವ ಬದಲಾವಣೆ ಇವರ ಬ್ಯಾಟಿಂಗ್ ಮೇಲೆ ಬಿದ್ದಿದೆ. ಇವರು ಈ ವರ್ಷದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಆದರೆ ಇವರ ಮುಂದಾಳತ್ವದಲ್ಲಿ ತಂಡ ಗೆಲುವಿನ ನಾಗಾಲೋಟವನ್ನು ಮುಂದುವರೆಸುತ್ತಿದೆ.
ಸೂರ್ಯಕುಮಾರ್ ಯಾದವ್ ಅವರಿಗೆ ಪ್ರಸ್ತುತ ವರ್ಷ ರನ್ ಕಲೆ ಹಾಕುವ ವಿಷಯದಲ್ಲಿ ಬಹುವಾಗಿ ಕಾಡಿದೆ. ಇವರು ಈ ವರ್ಷ ಆಡಿದ 20 ಟಿ20 ಪಂದ್ಯಗಳಲ್ಲಿ 14ರ ಸರಾಸರಿಯಲ್ಲಿ 213 ರನ್ ಕಲೆ ಹಾಕಿದ್ದಾರೆ. ಈ ವೇಳೆ ಸೂರ್ಯ ಒಂದೇ ಒಂದು ಅರ್ಧಶತಕವನ್ನು ಸಹ ಸಿಡಿಸಿಲ್ಲ. ಸೂರ್ಯ ಅವರ ಸರಾಸರಿಯನ್ನು ನೋಡಿದರೆ, ಇದೇ ವರ್ಷ ಅವರು ಅತಿ ಕಡಿಮೆ ರನ್ ಕಲೆ ಹಾಕಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಟೀಮ್ ಇಂಡಿಯಾದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಸಹ ಸೂರ್ಯ ಅವರಂತೆ ರನ್ ಬರವನ್ನು ಅನುಭವಿಸುತ್ತಿದ್ದಾರೆ. ಇವರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಆದರೆ ಚುಟುಕು ಫಾರ್ಮೆಟ್‌ನಲ್ಲಿ ಇವರ ರನ್ ಬರ ಮುಂದುವರೆದಿದೆ. ಕಳೆದ ಹಲವು ತಿಂಗಳುಗಳಿಂದ ಟಿ20 ತಂಡದಿಂದ ಹೊರಗೆ ಉಳಿದಿದ್ದ ಗಿಲ್ ಅವರಿಗೆ ಏಷ್ಯಾ ಕಪ್ ಟಿ20 ವೇಳೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅಲ್ಲದೆ ಉಪನಾಯಕನ ಜವಾಬ್ದಾರಿ ನೀಡಲಾಯಿತು. ಇವರು ಈ ವರ್ಷ ಆಡಿದ 15 ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 291 ರನ್ ಕಲೆ ಹಾಕಿದ್ದಾರೆ. ಇವರ ಬ್ಯಾಟ್‌ನಿಂದ ಒಂದೇ ಒಂದು ಬಿಗ್ ಇನಿಂಗ್ಸ್ ಮೂಡಿಬಂದಿಲ್ಲ. ಈ ಆಟಗಾರರ ಫಾರ್ಮ್ ನಿಜಕ್ಕೂ ಟೀಮ್ ಇಂಡಿಯಾಕ್ಕೆ ತಲೆ ನೋವಾಗಿದೆ.