ಆಗಸ್ಟ್ 11 ಭಾನುವಾರ, ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ತಮ್ಮ ಹೆಡ್ ಕೋಚ್ ಸ್ಥಾನವನ್ನು ತೊರೆದಿದ್ದರು. ದ್ರಾವಿಡ್ ಮತ್ತೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರಲಿಲ್ಲ. ಅವರ ಸ್ಥಾನಕ್ಕೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಲಾಗಿತ್ತು.
ಗಂಭೀರ್ ಅವರ ತರಬೇತಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಆದರೆ, ಏಕದಿನ ಸರಣಿಯಲ್ಲಿ ಭಾರತಕ್ಕೆ ಯಶಸ್ಸು ಸಿಗಲಿಲ್ಲ. ಗಂಭೀರ್ ಕೋಚ್ ಆದ ಕೂಡಲೇ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ಭಾರತ ತಂಡದ ಪೂರ್ಣಾವಧಿ ನಾಯಕರನ್ನಾಗಿ ಮಾಡಲಾಯಿತು. ಈ ಹಿಂದೆಯೂ ಅವರು ಭಾರತ ತಂಡದ ನಾಯಕರಾಗಿದ್ದರು.

ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ ಸ್ವರೂಪದಿಂದ ನಿವೃತ್ತರಾದರು. ಈ ವೇಳೆ ಹಾರ್ದಿಕ್ ಪಾಂಡ್ಯ ನಾಯಕರಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ನಾಯಕನ ಸ್ಥಾನಕ್ಕೆ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಿದರು.
ನಾಯಕನನಾದ ಮೇಲೆ ಚೊಚ್ಚಲ ಟಿ20 ಸರಣಿಯನ್ನು ಸೂರ್ಯಕುಮಾರ್ ಗೆದ್ದಿದ್ದರು ಇದೀಗ ಸೂರ್ಯ ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡಲು ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಕೊನೆ ಬಾರಿಗೆ ಸೂರ್ಯ ಟೆಸ್ಟ್ ಆಡಿದ್ದರು.
ಸದ್ಯ ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಭಾರತ ತಂಡ ವಿರಾಮದಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮೈದಾನಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ತನ್ನ ತವರು ನೆಲದಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.
ಆ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸೂರ್ಯ ತಯಾರಾಗಿದ್ದಾರೆ. ಗಂಭೀರ್ ಅವರ ಯುಗದಲ್ಲಿ ಸೂರ್ಯ ಅವರ ಟೆಸ್ಟ್ ಕ್ರಿಕೆಟ್‌ನ ಅದೃಷ್ಟ ಬದಲಾಗುವುದೇ ಎಂಬುದು ಕುತೂಹಲ ಮೂಡಿಸಿದೆ.
ಏಕೆಂದರೆ ಗಂಭೀರ್ ಅವರು ಸೂರ್ಯನ ಮೇಲೆ ಬೆಟ್ಟದಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದು, ಸೂರ್ಯ ಕೂಡ ಆ ಭರವಸೆಯನ್ನು ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆಲ್ಲುವ ಮೂಲಕ ಉಳಿಸಿಕೊಂಡಿದ್ದಾರೆ. ಹೀಗಾಗಿ ಟೆಸ್ಟ್ ತಂಡದಲ್ಲಿ ಸೂರ್ಯ ಅವರಿಗೆ ಗಂಭೀರ್ ಅವಕಾಶ ನೀಡುವ ಸಾಧ್ಯತೆಯಿದೆ.
"ನಾನು ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಬಯಸುತ್ತೇನೆ. ಬುಚ್ಚಿ ಬಾಬು ಟೂರ್ನಿ ಆಡುವುದರಿಂದ ಈ ಋತುವಿನ ರೆಡ್-ಬಾಲ್ ಪಂದ್ಯಾವಳಿಗಳಿಗೆ ನನಗೆ ಉತ್ತಮ ತಯಾರಿ ಸಿಗುತ್ತದೆ" ಎಂದು ಸೂರ್ಯಕುಮಾರ್ ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.