ಸೆಪ್ಟಂಬರ್ 9 ರಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೆ.10 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಅಲ್ಲದೆ ಶುಭಮನ್ ಗಿಲ್ ಅವರಿಗೆ ಉಪನಾಯಕನ ಪಟ್ಟ ಸಿಕ್ಕಿದೆ. ಟಿ20 ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಈ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸ ಹೊಂದಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಮೇಲೆ ನೆಟ್ಟಿರಲಿವೆ.
ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಬಿಗ್ ಇವೆಂಟ್‌ನಲ್ಲಿ ಭಾಗವಹಿಸುತ್ತಿದೆ. ಯುವ ಆಟಗಾರರಿಂದಲೇ ಕುಡಿಕೊಂಡಿರುವ ತಂಡದಲ್ಲಿ ಹಲವು ಅನುಭವಿ ಆಟಗಾರರು ಸಹ ಇದ್ದಾರೆ. ಸೂರ್ಯಕುಮಾರ್ ಯಾದವ್ ಈ ಟೂರ್ನಿಯಲ್ಲಿ ಮತ್ತೊಂದು ದಾಖಲೆ ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಹಾಗಿದ್ದರೆ ಆ ದಾಖಲೆ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಈ ವರೆಗೆ 146 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರು ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಇನ್ನು ನಾಲ್ಕು ಸಿಕ್ಸರ್ ಬಾರಿಸಿದಲ್ಲಿ, ಚುಟುಕು ಫಾರ್ಮೆಟ್‌ನಲ್ಲಿ ಇವರು 150 ಸಿಕ್ಸರ್ ಪೂರ್ಣಗೊಳಿಸಿದ ದಾಖಲೆ ಬರೆಯಲಿದ್ದಾರೆ. ಇಲ್ಲಿಯವರೆಗೆ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ಇವರು ಚುಟುಕು ಫಾರ್ಮೆಟ್‌ನಲ್ಲಿ 205 ಸಿಕ್ಸರ್ ಬಾರಿಸಿದ್ದಾರೆ. ಬರೀ ಭಾರತದ ಪರ ಅಷ್ಟೇ ಅಲ್ಲ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ2ಒ ಪಂದ್ಯಗಳಲ್ಲೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ.
ರೋಹಿತ್ ಶರ್ಮಾ 205
ಮಾರ್ಟಿನ್ ಗಪ್ಟಿಲ್ 173
ಮುಹಮ್ಮದ್ ವಾಸಿಮ್ 168
ಜೋಸ್ ಬಟ್ಲರ್ 160
ನಿಕೋಲಸ್ ಪೂರನ್ 149

ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್‌ನಲ್ಲಿ ನಾಲ್ಕು ಸಿಕ್ಸರ್ ಬಾರಿಸುವಲ್ಲಿ ಸಫಲರಾದರೆ, ಚುಟುಕು ಫಾರ್ಮೆಟ್‌ನಲ್ಲಿ 150ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಐದನೇ ಹಾಗೂ ಭಾರತದ ಎರಡನೇ ಬ್ಯಾಟರ್ ಆಗುತ್ತಾರೆ. ಈ ಸರಣಿಯಲ್ಲಿ ಸೂರ್ಯ ಗ್ಲೆನ್ ಮ್ಯಾಕ್ಸ್‌ವೆಲ್ (148 ಸಿಕ್ಸರ್‌ಗಳು) ಮತ್ತು ನಿಕೋಲಸ್ ಪೂರನ್ (149 ಸಿಕ್ಸರ್‌ಗಳು) ಅವರ ದಾಖಲೆಯನ್ನು ಮೀರಿ ನಿಲ್ಲುವ ಕನಸಿನಲ್ಲಿದ್ದಾರೆ.
ಐಪಿಎಲ್‌ನಲ್ಲಿ ಮಿಂಚಿದ ಬಳಿಕ ಸೂರ್ಯಕುಮಾರ್ ಯಾದವ್ ಅವರಿಗೆ 2021ರಲ್ಲಿ ಭಾರತದ ಪರ ಆಡುವ ಅವಕಾಶ ಲಭಿಸಿತು. ಅಲ್ಲಿಂದ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಇವರು ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು. ಇವರು ಒಟ್ಟು ಆಡಿದ 83 ಟಿ20 ಪಂದ್ಯಗಳಲ್ಲಿ 2598 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 21 ಅರ್ಧಶತಕಗಳು ಸೇರಿವೆ.