
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ.
ಲಕ್ನೋದಲ್ಲಿ ನಡೆದ ಟಿ20 ಪಂದ್ಯದಲ್ಲಿ ಬ್ಯಾಟರ್ ಗಳು ಪ್ರತಿ ರನ್ ಗಳಿಸಲು ಪರದಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 99 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಗೆಲುವಿಗಾಗಿ 100 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ತಾಳ್ಮೆಯ ಆಟವಾಡುವ ಮೂಲಕ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 101 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತು.

ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಲಕ್ನೋ ಅಂಗಳದಲ್ಲಿ ರನ್ ಗಳಿಸಲು ಪರದಾಡಿದರು. 31 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ ಅಜೇಯ 26 ರನ್ ಗಳಿಸಿದರು, ಅವರ ಇನ್ನಿಂಗ್ಸ್‌ನಲ್ಲಿ ಬಾರಿಸಿದ್ದು ಕೇವಲ 1 ಬೌಂಡರಿ ಮಾತ್ರ. ಕೊನೆಯವರೆಗೂ ಎಚ್ಚರಿಕೆ ಬ್ಯಾಟಿಂಗ್ ಮಾಡಿದ ಅವರು ಭಾರತವನ್ನು ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾದರು.
ಬ್ಯಾಟಿಂಗ್ ಬಗ್ಗೆ ಸೂರ್ಯ ಪ್ರತಿಕ್ರಿಯೆ
ತಮ್ಮ ನಿಧಾನಗತಿಯ ಬ್ಯಾಟಿಂಗ್ ಮಾತನಾಡಿರುವ ಸೂರ್ಯಕುಮಾರ್ ಯಾದವ್, ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ಸ್ಪಿನ್‌ಗೆ ಹೆಚ್ಚಿನ ನೆರವು ಸಿಗುತ್ತಿದ್ದ ಪಿಚ್‌ನಲ್ಲಿ ನ್ಯೂಜಿಲೆಂಡ್ ಐವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸಿತ್ತು.
14.3 ಓವರ್ ಗಳಲ್ಲಿ 70 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ 32 ಎಸೆತಗಳಲ್ಲಿ ಅಜೇಯ 31 ರನ್‌ಗಳ ಜೊತೆಯಾಟ ಆಡುವ ಮೂಲಕ ಜಯ ತಂದುಕೊಟ್ಟರು.

ಕಠಿಣ ಸನ್ನಿವೇಶದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, "ಕೊನೆಯ ಓವರ್ ವರೆಗೆ ವಿಕೆಟ್ ಕಾಪಾಡಿಕೊಂಡರೆ ತಂಡಕ್ಕೆ ಗೆಲುವು ತಂದುಕೊಡುತ್ತೇನೆ ಎನ್ನುವ ವಿಶ್ವಾಸವಿತ್ತು. ವಿಕೆಟ್ ಕಾಪಾಡಿಕೊಳ್ಳುವುದು ಮುಖ್ಯವಾಗಿತ್ತು" ಎಂದು ಹೇಳಿದ್ದಾರೆ.
ಬ್ಯಾಟಿಂಗ್ ಮಾಡಲು ಕಠಿಣವಾಗಿತ್ತು
"ಬ್ಯಾಟಿಂಗ್ ಮಾಡಲು ಕಠಿಣ ವಿಕೆಟ್ ಆಗಿತ್ತು, ಯಾರಾದರೂ ಒಬ್ಬರು ಕೊನೆಯವರೆಗೂ ಬ್ಯಾಟಿಂಗ್ ಮಾಡುವುದು ಮುಖ್ಯವಾಗಿತ್ತು ಎನ್ನುವ ಸ್ಪಷ್ಟ ಮನಸ್ಥಿತಿಯೊಂದಿಗೆ ನಾನು ಕ್ರೀಸ್‌ನಲ್ಲಿದ್ದೆ. ಜೊತೆಯಾಟ ಆಡುವುದು ಮತ್ತು ಸನ್ನಿವೇಶಕ್ಕೆ ಹೊಂದಿಕೊಳ್ಳುವುದು ಬಹಳ ಮುಖ್ಯವಾಗಿತ್ತು" ಎಂದು ಹೇಳಿದರು.
"ನಾನು ಮುಕ್ತವಾಗಿ ಆಡುವ ವಿಕೆಟ್‌ಗಿಂತ ಇದು ವಿಭಿನ್ನವಾದ ವಿಕೆಟ್ ಎಂದು ತಿಳಿದಿತ್ತು. ಕೊನೆಯ ಓವರ್ ವರೆಗೂ ಆಡಿದರೆ ಪಂದ್ಯವನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗಿತ್ತು, ಪಾಂಡ್ಯ ಕ್ರೀಸ್‌ಗೆ ಬಂದಾಗ ಇಬ್ಬರೂ ಇದನ್ನೇ ಚರ್ಚಿಸಿದ್ದೆವು. ಕೊನೆಯವರೆಗೂ ಬ್ಯಾಟಿಂಗ್ ಮಾಡಲು ಯೋಜಿಸಿದ್ದೆವು" ಎಂದು ಹೇಳಿದರು.