ಭಾರತ 2024ರಲ್ಲಿ ಹಲವು ಸ್ಮರಣೀಯ ಕ್ರಿಕೆಟ್ ಆಟವನ್ನು ಆಡಿದೆ. ಆದರೆ ಅಭಿಮಾನಿಗಳ ಮನದಲ್ಲಿ ಇವುಗಳಲ್ಲಿ ಕೆಲವು ಮಾತ್ರ ಉಳಿದಿರುತ್ತವೆ. ಈ ವರ್ಷದ ಜೂನ್ 29 ರಂದು ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ವಿಶ್ವಕಪ್ ಪಂದ್ಯ ಬಹುಕಾಲ ನೆನಪಿನಲ್ಲಿ ಇರಬಹುದಾದ ಪಂದ್ಯ. ಸತತ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ ಮುಗ್ಗರಿಸುತ್ತಿದ್ದ ಭಾರತ, ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಭಾರತ ಈ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರ ಹಿಂದೆ ಆ ಸೂಪರ್ ಮ್ಯಾನ್ ಕೈವಾಡ ದೊಡ್ಡದು.
ಬಾರ್ಬಡೋಸ್‌ನಲ್ಲಿ ನಡೆದ ಪಂದ್ಯ ಟೀಮ್ ಇಂಡಿಯಾ ಅಭಿಮಾನಿಗಳ ಪಾಲಿಗೆ ಈಗಲೂ ಹಸಿರಾಗಿದೆ. ಇದಕ್ಕೆ ಮುಖ್ಯವಾಗಿ ಹಲವು ಕಾರಣಗಳಿವೆ. ಟೂರ್ನಿಯುದಕ್ಕೂ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ವಿರಾಟ್, ಬಿಗ್ ಮ್ಯಾಚ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಸಿಡಿಸಿತ್ತು.

ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 15 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 147 ರನ್ ಸೇರಿಸಿ ಸುಸ್ಥಿತಿಯಲ್ಲಿತ್ತು. ಆಫ್ರಿಕಾ ತಂಡಕ್ಕೆ ಗೆಲುವಿಗೆ 30 ಎಸೆತಗಳಲ್ಲಿ 30 ರನ್ ಅವಶ್ಯಕತೆ ಇತ್ತು. ಆಗ ಎಲ್ಲರೂ ಆಫ್ರಿಕಾ ಗೆಲ್ಲುತ್ತದೆ ಎಂದೇ ಭಾವಿಸಿದ್ದರು. ಬುಮ್ರಾ, ಹಾರ್ದಿಕ್, ಅರ್ಷದೀಪ್ ಸಿಂಗ್ ಮನಮೋಹಕ ಬೌಲಿಂಗ್ ದಾಳಿ ನಡೆಸಿದರು. ಪರಿಣಾಮ ಪಂದ್ಯ ಕೊನೆಯ ಓವರ್ ವರೆಗೂ ಸಾಗಿತು.
ಕೊನೆಯ ಓವರ್‌ನಲ್ಲಿ 6 ಎಸೆತಗಳಲ್ಲಿ ಆಫ್ರಿಕಾಕ್ಕೆ 16 ರನ್ ಅವಶ್ಯಕತೆ ಇತ್ತು. ಆಗ ಹಾರ್ದಿಕ್ ಕೊನೆಯ ಓವರ್ ಬೌಲ್ ಮಾಡಿದರು. ಇವರ ಕೊನೆಯ ಓವರ್‌ನ ಮೊದಲ ಎಸೆತ ವೈಡ್ ಫುಲ್ ಟಾಸ್ ಆಗಿತ್ತು. ಸ್ಟ್ರೈಕ್‌ನಲ್ಲಿದ್ದ ಡೇವಿಡ್ ಮಿಲ್ಲರ್ ಲಡ್ಡು ಬಂದು ಬಾಯಿಗೆ ಬಿತ್ತು ಎಂಬಂತೆ ವೈಡ್ ಲಾಂಗ್ ಆಫ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು.

ಆದರೆ ಅದೇ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಮನಮೋಹಕ ಕ್ಯಾಚ್ ಪಡೆದರು. ಗಾಳಿಯಲ್ಲಿ ತೇಲಿ ಬರುತ್ತಿರುವ ಚೆಂಡನ್ನು ನೋಡಿದ ಸೂರ್ಯ ಓಡಲು ಮುಂದಾದರು. ಅಲ್ಲದೆ ತಮ್ಮ ಎಡಗಡೆ ಎರಡೂ ಕೈ ಹಾಕಿ ಚೆಂಡನ್ನು ಹಿಡಿದರು. ಆದರೆ ಅವರಿಗೆ ಆಗ ಬ್ಯಾಲೆನ್ಸ್ ಮಾಡಲು ಸಾಧ್ಯವೆ ಆಗಲಿಲ್ಲ. ಪರಿಣಾಮ ಅವರು ಚೆಂಡನ್ನು ಮತ್ತೆ ಗಾಳಿಯಲ್ಲಿ ತೂರಿ, ಬೌಂಡರಿ ಗೆರೆ ದಾಟಿ ಮತ್ತೆ ಒಳಗೆ ಬಂದು ಕ್ಯಾಚ್ ಕಂಪ್ಲೀಟ್ ಮಾಡಿದರು.
ನಿಜಕ್ಕೂ ಆ ಕ್ಯಾಚ್ ನೋಡಿದ ಅಭಿಮಾನಿಗಳು ಸಂಭ್ರಮಿಸಿದರು. ಕೈ ಯಿಂದ ಜಾರಿ ಹೋರ ಕಪ್ ಮತ್ತೆ ಟೀಮ್ ಇಂಡಿಯಾ ಕೈ ಸೇರಲು ಸೂರ್ಯಕುಮಾರ್ ಯಾದವ್ ಹಿಡಿದ ಮನಮೋಹಕ ಕ್ಯಾಚ್ ನೆರವಾಯಿತು. ಅಭಿಮಾನಿಗಳು ಸೂರ್ಯ ಹಿಡಿದ ಈ ಕ್ಯಾಚ್‌ನ್ನು ಬಹು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.