ಜನವರಿ 22 ರಿಂದ ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯ ಮೇಲೆ ಟೀಮ್ ಇಂಡಿಯಾದ ಅಭಿಮಾನಿಗಳ ಚಿತ್ತ ನೆಟ್ಟಿದೆ. ಕೆಲವು ತಿಂಗಳುಗಳು ಕಾಲ ಟೆಸ್ಟ್ ಮೈಂಡ್ ಸೆಟ್‌ಗೆ ಹೊಂದಿಕೊಂಡಿದ್ದ ಫ್ಯಾನ್ಸ್, ಚುಟುಕು ಫಾರ್ಮೆಟ್‌ಗೆ ಹೊಂದಿಕೊಳ್ಳಲು ರೆಡಿಯಾಗಿದ್ದಾರೆ. ಈ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ತನ್ನ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಭರವಸೆಯ ಆಟಗಾರರಿಗೆ ಅವಕಾಶ ನೀಡಲಾಗಿದೆ. ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾ ತನ್ನ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಟಿ20 ಸರಣಿಯಲ್ಲಿ ಅಕ್ಷರ್ ಪಟೇಲ್‌ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಸ್ಟಾರ್ ಆಲ್‌ರೌಂಡರ್‌ಗಳ ದಂಡೇ ತಂಡದಲ್ಲಿದೆ. ಇನ್ನು ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಲಯದಲ್ಲಿದ್ದರೆ, ಯಾವುದೇ ಬೌಲರ್‌ಗಳನ್ನು ದಂಡಿಸುವ ಕ್ಷಮತೆಯನ್ನು ಹೊಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರನ್ನು ನೋಡಿದರೆ, ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಅಗ್ರ ಸ್ಥಾನ. ಇವರು 648 ರನ್ ಸಿಡಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 467 ರನ್ ಬಾರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಇವರು ಒಟ್ಟು 321 ರನ್ ಗಳಿಸಿದ್ದಾರೆ. ಸೂರ್ಯ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 147 ರನ್ ಗಳಿಸುವಲ್ಲಿ ಯಶಸ್ವಿ ಆದರೆ, ಇವರು ರೋಹಿತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಬಹುದು.
ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಬಳಿಕ ಸೂರ್ಯಕುಮಾರ್ ಯಾದವ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶವನ್ನು ನೀಡಲಾಯಿತು. ಇವರು 2021 ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. ನಂತರ ಅಲ್ಪ ಕಾಲದಲ್ಲಿ ದೊಡ್ಡ ಸಾಧನೆ ಮಾಡುವ ಸೂಚನೆಯನ್ನು ಸಹ ನೀಡಿದರು. ಇವರು ಮೈದಾನದಲ್ಲಿದ್ದರೆ 360 ಡಿಗ್ರಿಗಳಲ್ಲಿ ರನ್ ಕಲೆ ಹಾಕಬಲ್ಲ ಪ್ಲೇಯರ್. ಇವರು ಈಗಾಗಲೇ ಭಾರತದ ಪರ 78 ಟಿ20 ಪಂದ್ಯಗಳಲ್ಲಿ 2570 ರನ್ ಗಳಿಸಿದ್ದಾರೆ, ಇದರಲ್ಲಿ ನಾಲ್ಕು ಶತಕಗಳು ಮತ್ತು 21 ಅರ್ಧ ಶತಕಗಳು ಸೇರಿವೆ.

ವಿರಾಟ್ ಕೊಹ್ಲಿ- 648 ರನ್
ರೋಹಿತ್ ಶರ್ಮಾ- 467 ರನ್
ಸೂರ್ಯಕುಮಾರ್ ಯಾದವ್- 321 ರನ್
ಹಾರ್ದಿಕ್ ಪಾಂಡ್ಯ- 302 ರನ್
ಮಹೇಂದ್ರ ಸಿಂಗ್ ಧೋನಿ- 296 ರನ್
ಟಿ20 ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).