
ಸದ್ಯ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟರ್ ಆಗಿ ಮಿಂಚುತ್ತಿರುವ ಸೂರ್ಯಕುಮಾರ್ ಯಾದವ್ ಐದು ವರ್ಷಗಳ ಮೊದಲೇ ಭಾರತ ತಂಡಕ್ಕಾಗಿ ಆಡಬೇಕಿತ್ತು ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ಭಾರತೀಯ ಆಯ್ಕೆದಾರರು ಸೂರ್ಯ ಅವರ ವೃತ್ತಿಜೀವನದ ಅಮೂಲ್ಯ 5 ವರ್ಷಗಳನ್ನು ವ್ಯರ್ಥ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಡ್ಯಾನಿಶ್ ಕನೇರಿಯಾ, ಸೂರ್ಯಕುಮಾರ್ ಅವರಿಗೆ ತಡವಾಗಿ ಅವಕಾಶ ಸಿಕ್ಕಿದರೂ ಅವರು ಅದನ್ನು ಸರಿಯಾಗಿ ಬಳಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆತನ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಎಂದು ಹೇಳಿದರು.
"ಭಾರತೀಯ ತಂಡದ ಆಟಗಾರರು ಸೂರ್ಯಕುಮಾರ್ ಯಾದವ್‌ರ ಐದು ಅತ್ಯಮೂಲ್ಯ ವರ್ಷಗಳನ್ನು ವ್ಯರ್ಥ ಮಾಡಿದ್ದಾರೆ. ಆದರೂ, ಆತ ಕಳೆದುಹೋದ ಸಮಯವನ್ನು ತನ್ನ ಪ್ರದರ್ಶನದಿಂದ ಸರಿದೂಗಿಸಿಕೊಂಡಿದ್ದಾರೆ. ಸ್ಥಿರವಾದ ಪ್ರದರ್ಶನ ನೀಡುವ ಮೂಲಕ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈಗ ಎಲ್ಲಿ ನೋಡಿದರೂ, ಪ್ರತಿಯೊಬ್ಬ ಕ್ರಿಕೆಟ್ ತಜ್ಞರು, ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.

ನ್ಯೂಜಿಲೆಂಡ್ ವಿರುದ್ಧ ಶತಕ ಗಳಿಸಿದ ಸೂರ್ಯ
ನವೆಂಬರ್ 20 ರ ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಶತಕ ಗಳಿಸಿದರು. ಕೇವಲ 51 ಎಸೆತಗಳಲ್ಲಿ 111 ರನ್ ಗಳಿಸಿದರು. ಒಂದೇ ವರ್ಷದಲ್ಲಿ ಎರಡು ಟಿ20 ಶತಕ ಗಳಿಸಿದ ದಾಖಲೆ ನಿರ್ಮಿಸಿದರು.
ಈ ರೀತಿಯ ಹೊಡೆತಗಳನ್ನು ಇಲ್ಲಿಯವರೆಗೂ ಯಾವ ಕ್ರಿಕೆಟಿಗನೂ ಆಡಿಲ್ಲ ಎಂದು ಕನೇರಿಯಾ ಹೊಗಳಿದ್ದಾರೆ. ಆತನಂತೆ ಆಡುವ ಸಾಮರ್ಥ್ಯವನ್ನು ಸದ್ಯ ಯಾವ ಕ್ರಿಕೆಟಿಗನೂ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಆತನಿಗೆ ಬೌಲಿಂಗ್ ಮಾಡುವುದು ಕಷ್ಟ
ಆತನ 360 ಡಿಗ್ರಿ ಬ್ಯಾಟಿಂಗ್ ಮಾಡುವ ಬ್ಯಾಟಿಂಗ್ ಸಾಮರ್ಥ್ಯ ಎದುರಾಳಿ ಬೌಲರ್ ಗಳಿಗೆ ಕಠಿಣವಾಗಿದೆ. ಆತ ಯಾವ ಹೊಡೆತ ಆಡುತ್ತಾನೆ ಎನ್ನುವುದನ್ನು ಬೌಲರ್ ಗಳಿಗೆ ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾಗಿದೆ ಎಂದು ಹೇಳಿದರು.
"ಸೂರ್ಯಕುಮಾರ್ ಯಾದವ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಅನ್ನು ಮುಂದುವರೆಸಿದ್ದಾರೆ. ಟಿ20 ವಿಶ್ವಕಪ್‌ಗೆ ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಕೂಡ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೂಡ ಅದನ್ನು ಮುಂದುವರೆಸಿದ್ದಾರೆ" ಎಂದು ಹೇಳಿದರು.
ಸೂರ್ಯಕುಮಾರ್ ಸದ್ಯ 2022ರಲ್ಲಿ 1151 ರನ್ ಗಳಿಸುವ ಮೂಲಕ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಸತತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಸದ್ಯ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ 65 ರನ್‌ಗಳ ಜಯ ಸಾಧಿಸಿದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ನಿರ್ಣಾಯಕ ಪಂದ್ಯ ನವೆಂಬರ್ 21ರಂದು ನೇಪಿಯರ್‌ನಲ್ಲಿ ನಡೆಯಲಿದೆ.