ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಹೊಂದಿದ್ದಾರೆ. ಈ ವಿಶ್ವ ದಾಖಲೆಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮುರಿಯಲಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 6 ರಿಂದ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆ ತೋರಿದ್ದಾರೆ. ಜೊತೆಗೆ ಮ್ಯಾಕ್ಸ್‌ವೆಲ್ ಮತ್ತು ರೋಹಿತ್ ಅವರ ವಿಶ್ವದಾಖಲೆಯನ್ನು ಮುರಿಯುವ ಸಮೀಪದಲ್ಲಿರುವ ಏಕೈಕ ಬ್ಯಾಟರ್ ಆಗಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅಪಾಯಕಾರಿ ಬ್ಯಾಟರ್‌ಗಳಾಗಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರೋಹಿತ್ ನಿವೃತ್ತಿ ಹೇಳಿದ್ದರೂ, ಟೆಸ್ಟ್ ಮತ್ತು ಏಕದಿನದಲ್ಲಿ ಅವರ ಬಿರುಸಿನ ಬ್ಯಾಟಿಂಗ್ ಮುಂದುವರೆದಿದೆ. ಈ ಇಬ್ಬರೂ ಅನುಭವಿ ಬ್ಯಾಟರ್‌ಗಳು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇಬ್ಬರ ಹೆಸರಲ್ಲೂ ತಲಾ 5 ಶತಕಗಳು ದಾಖಲಾಗಿದ್ದು, ಜಂಟಿಯಾಗಿ ಆಗ್ರ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನಕ್ಕೇರಲು ತುಂಬಾ ಹತ್ತಿರದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರು ಎರಡು ಶತಕಗಳನ್ನು ಸಿಡಿಸಿದರೆ, ರೋಹಿತ್ ಮತ್ತು ಮ್ಯಾಕ್ಸ್‌ವೆಲ್ ವಿಶ್ವ ದಾಖಲೆಯನ್ನು ಮುರಿಯಬಹುದು. ಸೂರ್ಯ ಹೆಸರಿನಲ್ಲಿ 4 ಟಿ20 ಶತಕಗಳಿವೆ.
ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಹೋಲಿಸಿದರೆ, ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಕಡಿಮೆ ಆಡಿದ್ದಾರೆ. ಆದರೆ, ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಸೃಷ್ಟಿಸಿದ್ದಾರೆ. ಅಕ್ಟೋಬರ್ 6 ರಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಟಿ 20 ಅಂತರರಾಷ್ಟ್ರೀಯ ಸರಣಿಯಲ್ಲಿ, ಅವರು ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್ ಆಗಬಹುದು.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್, ಇದುವರೆಗೆ ಆಡಿರುವ 71 ಪಂದ್ಯಗಳಲ್ಲಿ 68 ಇನ್ನಿಂಗ್ಸ್‌ಗಳಿಂದ 2432 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 117 ರನ್ ಆಗಿದ್ದು, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಅವರು 136 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.