
ಮುಂಬೈ, ಏಪ್ರಿಲ್ 21: ಕಾಲದ ಗಡಿಯಾರದ ಮುಂದೆ ನಾವೆಷ್ಟು ಬದಲಾಗುತ್ತಾ ಹೋಗುತ್ತೇವೆ ಅಲ್ಲವೆ? ಈಗ ಒಂದು ರೀತಿ ಇದ್ದವರು ಇನ್ನತ್ತು ವರ್ಷ ಕಳೆದ ಮೇಲೆ ಇನ್ ಹೇಗೋ ಬದಲಾಗಿರುತ್ತೇವೆ. ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 9 ವರ್ಷಗಳ ಹಿಂದಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
2011ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಕ್ಯಮರಾದೆದುರು ನಕ್ಕು ಪೋಸ್ ಕೊಟ್ಟಿದ್ದ ಫೋಟೋ ಇದು. ದೇಸಿ ದಿರಿಸಿನಲ್ಲಿರುವ ಚಿಗುರು ಮೀಸೆಯ ಹಾರ್ದಿಕ್-ಕೃನಾಲ್ ಅವರ ಫೋಟೋ ನೋಡೋಕೆ ಗಮ್ಮತ್ತಾಗಿಯೂ ಇದೆ. ಕಿರಿಯ ಸಹೋದರ ಹಾರ್ದಿಕ್ ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಫೋಟೋ ಜೊತೆ ಹಾರ್ದಿಕ್, '2011ರ ಹಳೆಯ ಫೋಟೋ ಇದು. ಕಾಲ ಹೇಗೆಲ್ಲ ಬದಲಾಗುತ್ತದೆ ಅಲ್ಲವೆ ಕೃನಾಲ್ ಪಾಂಡ್ಯ?. ಸ್ವಾಗ್ ಮೇರಾ ದೇಸಿ ಹೈ' ಎಂದು ಬರೆದುಕೊಂಡಿದ್ದಾರೆ. ಬೆನ್ನು ನೋವಿಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ ಬಹುಕಾಲ ಟೀಮ್ ಇಂಡಿಯಾದಿಂದ ಹೊರಗಿದ್ದರು.

ಗಾಯದಿಂದ ಚೇತರಿಕೊಂಡ ಬಳಿಕ ಹಾರ್ದಿಕ್, ಕಳೆದ ಮಾರ್ಚ್‌ನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರವಾಸ ಬಂದಿದ್ದಾಗ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಆದರೆ ಭಾರತ vs ದಕ್ಷಿಣ ಆಫ್ರಿಕಾ ಸರಣಿ ನಡೆಯಲೇ ಇಲ್ಲ. ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯ ಮಳೆಯಿಂದ ರದ್ದಾದರೆ, ಇನ್ನೆರಡು ಪಂದ್ಯಗಳು ಕೊರೊನಾವೈರಸ್‌ನಿಂದ ರದ್ದುಗೊಂಡವು.