ಟಿ20 ವಿಶ್ವಕಪ್ ಸೋಲು; ಬಿಸಿಸಿಐ ಇದನ್ನು ಮಾಡಲೇಬೇಕೆಂದು ತಾಕೀತು ಮಾಡಿದ ಅನಿಲ್ ಕುಂಬ್ಳೆ

ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿನ ಸೋಲು ಭಾರತೀಯ ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯವಾಗಿ ಸೋತಿರುವುದು ನಂ.1 ಟಿ20 ತಂಡಕ್ಕೆ ತೀವ್ರ ಮುಜುಗರ ತರಿಸಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆರಂಭಿಕ ಬ್ಯಾಟಿಂಗ್ ವೈಫಲ್ಯ ಮತ್ತು ಕಳಪೆ ಬೌಲಿಂಗ್ ಪ್ರದರ್ಶನ ನೀಡಿದರ ಫಲವಾಗಿ, 15 ವರ್ಷಗಳ ನಂತರ ಭಾರತದ ಟಿ20 ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿತು. ವಿದೇಶಿ ಮೈದಾನಗಳಲ್ಲಿ ಪದೇಪದೇ ಮಹತ್ವದ ಪಂದ್ಯಗಳಲ್ಲಿ ಎಡವುತ್ತಿರುವುದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಗಂಭೀರವಾಗಿ ಯೋಚಿಸಬೇಕಾಗಿದೆ.
ಇದೇ ವಿಚಾರವಾಗಿ ಭಾರತ ತಂಡದ ಮಾಜಿ ಮುಖ್ಯ ಕೋಚ್ ಹಾಗೂ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಬಿಸಿಸಿಐಗೆ ತಾಕೀತು ಮಾಡಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರತದ ಯುವ ಆಟಗಾರರಿಗೆ ವಿಶ್ವದಾದ್ಯಂತ ವಿವಿಧ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ.

ಅನೇಕ ದೇಶಗಳು ಟಿ20 ಫ್ರಾಂಚೈಸ್ ಲೀಗ್ ಹೊಂದಿವೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಶಸ್ವಿಯಾದ ನಂತರ, ಅನೇಕ ದೇಶಗಳು ತಮ್ಮದೇ ಆದ ಟಿ20 ಫ್ರಾಂಚೈಸ್ ಲೀಗ್‌ಗಳನ್ನು ಹೊಂದಿದ್ದು, ಅವು ಅಭೂತಪೂರ್ವ ಯಶಸ್ಸನ್ನು ಕಂಡಿವೆ.
ಹೀಗಾಗಿ, ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತೀಯ ಯುವ ಆಟಗಾರರಿಗೆ ವಿದೇಶಿ ಮೈದಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಕ್ರಿಕೆಟ್‌ನ ಅನುಭವ ಪಡೆಯಲು ಅವಕಾಶ ನೀಡಬೇಕು ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗೆ ಭಾಗವಹಿಸಲು ಅವಕಾಶವಿದೆ. ಆದರೆ, ಬಿಸಿಸಿಐ ಯಾವುದೇ ಸಕ್ರಿಯ ಭಾರತೀಯ ಕ್ರಿಕೆಟಿಗರನ್ನು ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ನೀಡಿಲ್ಲ. ಇದು ವಿದೇಶದಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾರತದ ಹಿನ್ನಡೆಗೆ ಮತ್ತೊಂದು ಕಾರಣ ಎಂದು ಕನ್ನಡಿಗ ಅನಿಲ್ ಕುಂಬ್ಳೆ ವಾದವಾಗಿದೆ.

ಅವಕಾಶ ನೀಡುವುದು ಖಂಡಿತವಾಗಿಯೂ ಸಹಾಯ ಮಾಡುತ್ತದೆ
"ಭಾರತೀಯ ಯುವ ಆಟಗಾರರಿಗೆ ವಿದೇಶಿ ನೆಲದಲ್ಲಿ ಲೀಗ್ ಆಡಲು ಅವಕಾಶ ನೀಡುವುದು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತೀಯ ಕ್ರಿಕೆಟ್‌ನಲ್ಲಿ ಆಗಿರುವ ಬೆಳವಣಿಗೆಯೊಂದಿಗೆ ನಾವು ಅದನ್ನು ನೋಡಬಹುದು. ಉದಾಹರಣೆಗೆ, ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಭಾಗವಹಿಸುತ್ತಾರೆ. ಭಾರತೀಯ ಪಿಚ್‌ಗಳು ಮತ್ತು ಇಲ್ಲಿನ ವಾತಾವರಣವನ್ನು ಅರ್ಥಮಾಡಿಕೊಂಡಿದ್ದಾರೆ. ಇದು ಅವರಿಗೆ ಸಹಾಯ ಮಾಡಿದೆ," ಎಂದು ಅನಿಲ್ ಕುಂಬ್ಳೆ ಹೇಳಿರುವುದನ್ನು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ತಿಳಿಸಿದೆ.
"ಭಾರತೀಯ ಯುವ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಿ ಅನುಭವ ಪಡೆಯಲು ಅವಕಾಶ ನೀಡುವ ವಿಷಯದಲ್ಲಿ ಹಿಂಜರಿಕೆ ಏಕೆ?," ಎಂದು ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಪ್ರಶ್ನಿಸಿದ್ದಾರೆ.

ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್
"2024ರಲ್ಲಿ ಟಿ20 ವಿಶ್ವಕಪ್ ಗೆಲ್ಲಬೇಕೆಂದರೆ, ಮೊದಲು ಯುವ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕೆಂದು ನಾನು ಭಾವಿಸುತ್ತೇನೆ, ಆಗ ನೀವು ವಿಶ್ವಕಪ್ ಪಂದ್ಯಾವಳಿಗೆ ಉತ್ತಮವಾಗಿ ಸಿದ್ಧರಾಗಬಹುದು," ಎಂದು ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.
ಭಾರತ ಮತ್ತು ಇಂಗ್ಲೆಂಡ್ ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಗಳಿಸಿತ್ತು. ಪ್ರತ್ಯುತ್ತರವಾಗಿ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಜೋಡಿ ಕೇವಲ 16 ಓವರ್‌ಗಳಲ್ಲಿ ಮುರಿಯದ 170 ರನ್‌ಗಳ ಜೊತೆಯಾಟ ನೀಡಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications