ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತದ ಸೋಲಿಗೆ ಇದೇ ಕಾರಣ; ಮ್ಯಾಥ್ಯೂ ಹೇಡನ್

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅಂತರದ ಹೀನಾಯ ಸೋಲಿನ ನಂತರ ಹಲವು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ. ಇದೀಗ ಅವರ ಸಾಲಿಗೆ ಸದ್ಯದ ಪಾಕಿಸ್ತಾನ ತಂಡದ ಮೆಂಟರ್ ಆಗಿರುವ ಮ್ಯಾಥ್ಯೂ ಹೇಡನ್ ಸೇರಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿನ ಸೋಲಿನಿಂದ ಭಾರತದ ಕಳಪೆ ಬೌಲಿಂಗ್ ಪ್ರದರ್ಶನ ಜಗತ್ತಿನೆದುರು ಅನಾವರಣವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಎಲ್ಲ ಸಕಲ ಸೌಲಭ್ಯ ನೀಡಿದರೂ ಮತ್ತು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದರೂ ದಶಕದಿಂದ ಐಸಿಸಿ ಟ್ರೋಫಿ ಗೆಲುವು ಎನ್ನುವುದು ಗಗನ ಕುಸುಮವಾಗಿದೆ.
ಟಿ20 ವಿಶ್ವಕಪ್ 2022ಗಾಗಿ ಪಾಕಿಸ್ತಾನ ತಂಡದ ಮೆಂಟರ್ ಆಗಿರುವ ಮ್ಯಾಥ್ಯೂ ಹೇಡನ್ ಅವರು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತದ ಸೋಲಿಗೆ ಬೇರೆ ರೀತಿಯ ವ್ಯಾಖ್ಯಾನ ನೀಡಿದ್ದಾರೆ. ಮೆಲ್ಬೋರ್ನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡದ ಫೈನಲ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮ್ಯಾಥ್ಯೂ ಹೇಡನ್, ಭಾರತದ ಆರನೇ ಬೌಲಿಂಗ್ ಆಯ್ಕೆಯ ಕೊರತೆಯೇ ಸೆಮಿಫೈನಲ್ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.

ಆರನೇ ಬೌಲಿಂಗ್ ಆಯ್ಕೆ ಇಲ್ಲದಿರುವುದು ಸೋಲಿಗೆ ಕಾರಣ
"ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ತಂಡವು ಲೆಗ್-ಸ್ಪಿನ್ನಿಂಗ್ ಅಥವಾ ಆರನೇ ಬೌಲಿಂಗ್ ಆಯ್ಕೆ ಇಲ್ಲದಿರುವುದು ಸೋಲಿಗೆ ಕಾರಣವಾಗಿದೆ. ಆದರೆ ಪಾಕಿಸ್ತಾನ ತಂಡವು ಆರು ಬೌಲಿಂಗ್ ಆಯ್ಕೆಗಳನ್ನು ಹೊಂದಿದೆ ಮತ್ತು ಇಫ್ತಿಕರ್ ಅಹ್ಮದ್ ಅಗತ್ಯವಿದ್ದಲ್ಲಿ ಏಳನೇ ಬೌಲರ್ ಆಗಿದ್ದಾರೆ. ಹಾಗಾಗಿ ನಮ್ಮ ತಂಡ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ಮ್ಯಾಥ್ಯೂ ಹೇಡನ್ ಎರಡು ತಂಡಗಳ ಆಯ್ಕೆಯನ್ನು ಹೋಲಿಕೆ ಮಾಡಿದ್ದಾರೆ.

ಭಾರತೀಯ ಬೌಲರ್‌ಗಳನ್ನು ದಂಡಿಸಿದ ಬಟ್ಲರ್ ಮತ್ತು ಹೇಲ್ಸ್ ಜೋಡಿ
ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಮೊದಲ ಎಸೆತದಿಂದಲೇ ರನ್ ಗಳಿಸುವ ಮೂಲಕ ಭಾರತದ ಫೈನಲ್ ಆಸೆಯನ್ನು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಚಿವುಟಿ ಹಾಕಿತು. ಬಟ್ಲರ್ ಮತ್ತು ಹೇಲ್ಸ್ ಜೋಡಿ ಪವರ್‌ಪ್ಲೇನಲ್ಲಿ ಭಾರತೀಯ ಬೌಲರ್‌ಗಳನ್ನು ದಂಡಿಸಿದರು ಮತ್ತು ವೇಗವಾಗಿ ರನ್ ದಾಖಲಿಸಿದರು. ಅಡಿಲೇಡ್ ಓವಲ್‌ನಲ್ಲಿ 169 ರನ್‌ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ಇನ್ನೂ ನಾಲ್ಕು ಓವರ್‌ಗಳು ಮತ್ತು 10 ವಿಕೆಟ್‌ಗಳ ಕೈಯಲ್ಲಿರುವಂತೆ ಗೆದ್ದು ಬೀಗಿತು ಮತ್ತು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯಕ್ಕೆ ಟಿಕೆಟ್ ಕಾಯ್ದಿರಿಸಿತು.
ಮತ್ತೊಂದೆಡೆ, ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳಲ್ಲಿ ಸತತ ಸೋಲಿನ ನಂತರ ಅತ್ಯುತ್ತಮವಾಗಿ ಮರಳಿದರು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧ ನಿರ್ಣಾಯಕ ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ ಪ್ರವೇಶಿಸಿತು. ನಂತರ ಸೆಮಿಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಹಂತಕ್ಕೆ ತಲುಪಿತು.

ನಾವು ಯಶಸ್ಸು ಮತ್ತು ವೈಫಲ್ಯಗಳನ್ನು ಆನಂದಿಸಿದ್ದೇವೆ
"ನಾವು ಇದೀಗ ಅಂತಿಮ ಪಂದ್ಯದಲ್ಲಿದ್ದೇವೆ. ನಾವು ಟೀಕೆಗಳನ್ನು ಸ್ವೀಕರಿಸಿದ್ದೇವೆ, ನಾವು ಯಶಸ್ಸು ಮತ್ತು ವೈಫಲ್ಯಗಳನ್ನು ಆನಂದಿಸಿದ್ದೇವೆ," ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಸಲಹೆಗಾರ ಮ್ಯಾಥ್ಯೂ ಹೇಡನ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ ನಂತರ ಹೇಳಿದರು.
ನವೆಂಬರ್ 13, ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 2022ರ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಕಾದಾಡಲಿದೆ. ಮೆಲ್ಬೋರ್ನ್‌ನಲ್ಲಿ ಪ್ರತಿಕೂಲ ಹವಾಮಾನ ಮುನ್ಸೂಚನೆಯಿಂದಾಗಿ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ ಇದ್ದು, ಆದರೆ ಪಂದ್ಯ ರದ್ದಾದ ಸಂದರ್ಭದಲ್ಲಿ ಐಸಿಸಿ ಮೀಸಲು ದಿನವನ್ನು ನಿಗದಿಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications