T20 Worl Cup 2024: ಪಾಕಿಸ್ತಾನ ವಿರುದ್ಧ ಭಾರತ ಗೆದ್ದ ಬಳಿಕ ದೆಹಲಿ ಪೊಲೀಸ್ ಟ್ವೀಟ್ ವೈರಲ್!
ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 6 ರನ್‌ಗಳಿಂದ ರೋಚಕವಾಗಿ ಸೋಲಿಸಿತು.
ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಆಟ ಆರಂಭವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಅವರ ಅಲ್ಪ ಬ್ಯಾಟಿಂಗ್ ಕಾಣಿಕೆ ನಂತರ, ಭಾರತ 19 ಓವರ್‌ಗಳಲ್ಲಿ ಕೇವಲ 119 ರನ್‌ಗಳಿಗೆ ಆಲೌಟ್ ಆಗಿ, ಸಾಧಾರಣ ಮೊತ್ತವನ್ನು ಕಲೆಹಾಕಲು ಸಾಧ್ಯವಾಯಿತು.

ಬೌಲಿಂಗ್‌ನಲ್ಲಿ ಪಾಕಿಸ್ತಾನ ತಂಡದ ಪರ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಅಮೀರ್ ಎರಡು ವಿಕೆಟ್ ಪಡೆದು ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ನೆರವಾದರು.
ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ತನ್ನ ಮಾರಕ ಬೌಲಿಂಗ್ ದಾಳಿಯನ್ನು ಬಂಡವಾಳ ಮಾಡಿಕೊಂಡಿತು. ಪಂದ್ಯವು ಒಂದು ಹಂತದಲ್ಲಿ ಕೈಜಾರುವಂತೆ ತೋರಿತು. ಆದರೆ, ಭಾರತದ ಬೌಲರ್‌ಗಳ ಅದ್ಭುತ ಪ್ರದರ್ಶನದ ನಂತರ ಅದನ್ನು ಮರಳಿ ತನ್ನತ್ತ ತಿರುಗಿಸುವಲ್ಲಿ ಯಶಸ್ವಿಯಾದರು.
ಮೊಹಮ್ಮದ್ ರಿಜ್ವಾನ್ 31 ರನ್, ಬಾಬರ್ ಅಜಂ 13 ರನ್, ಉಸ್ಮಾನ್ ಖಾನ್ 13 ರನ್, ಫಖರ್ ಜಮಾನ್ 13 ರನ್ ಮತ್ತು ಇಮಾದ್ ವಾಸಿಮ್ ಅವರ 15 ರನ್‌ಗಳು ಗೆಲುವಿಗೆ ಸಾಕಾಗಲಿಲ್ಲ.

ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದ ನೆರವಿನಿಂದ ಪಾಕಿಸ್ತಾನ ತಂಡ ತನ್ನ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 113 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಂದ್ಯದ ನಂತರ, ದೆಹಲಿ ಪೊಲೀಸರ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಉಲ್ಲಾಸದ ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ಹಲವು ದಶಕಗಳಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.
ಉಭಯ ದೇಶಗಳ ಭಾವೋದ್ರಿಕ್ತ ಅಭಿಮಾನಿಗಳು ತಮ್ಮ ತಂಡಗಳ ಗೆಲುವನ್ನು ಇಷ್ಟಪಡುತ್ತಾರೆ ಮತ್ತು ಅದನ್ನು ಅದ್ಧೂರಿಯಾಗಿ ಸಂಭ್ರಮಿಸುತ್ತಾರೆ. ಈ ಹಿಂದೆ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಸೋತಾಗಲೆಲ್ಲಾ ಅಲ್ಲಿನ ಅಭಿಮಾನಿಗಳು ಟಿವಿಗಳನ್ನು ಒಡೆದು ಹಾಕಿರುವುದು ಉಂಟು. ಅದು ಇದೀಗ ಈ ಪಂದ್ಯದ ನಂತರವೂ ಮುಂದುವರೆದಿದೆ.
ಅಲ್ಲದೆ, ದೂರದ ಅಮೆರಿಕದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೈದಾನದಲ್ಲಿ ಮತ್ತು ಅಲ್ಲಿನ ಪ್ರಮುಖ ನಗರಗಳಲ್ಲಿ ಭಾರತ.. ಭಾರತ ಎಂದು ಘೋಷಣೆ ಕೂಗಿದರು. ಆದರೆ ಪಾಕ್‌ನ ಅಭಿಮಾನಿಗಳು ಕೈಕೈ ಹಿಸುಕಿಕೊಂಡು, ಸಪ್ಪೆ ಮೊರೆ ಹಾಕಿಕೊಂಡು ಹೋದರು.
ಈ ಕುರಿತು ದೆಹಲಿ ಪೊಲೀಸ್, "ಹೇ, ನ್ಯೂಯಾರ್ಕ್ ಪೊಲೀಸ್, ನಾವು ಎರಡು ದೊಡ್ಡ ಶಬ್ದಗಳನ್ನು ಕೇಳಿದ್ದೇವೆ. ಒಂದು 'ಇಂಡಿಯಾ, ಇಂಡಿಯಾ' ಮತ್ತು ಇನ್ನೊಂದು ಬಹುಶಃ ಒಡೆದ ಟಿವಿಗಳದ್ದು. ದಯವಿಟ್ಟು ನೀವು ಖಚಿತಪಡಿಸಬಹುದೇ?" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಭಾರತ ತಂಡದ ಬಗ್ಗೆ ಮಾತನಾಡುವುದಾದರೆ, ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಮತ್ತು ಎ ಗುಂಪಿನ ಅಗ್ರಸ್ಥಾನದಲ್ಲಿ ಉಳಿಯಲು ಕೇವಲ ಒಂದು ಪಂದ್ಯದ ಗೆಲುವಿನ ಅಗತ್ಯವಿದೆ.
ಇನ್ನು ಭಾರತ ಜೂನ್ 12ರಂದು ಯುಎಸ್ಎ ತಂಡ ಮತ್ತು ಜೂನ್ 15ರಂದು ಕೆನಡಾ ತಂಡವನ್ನು ಎದುರಿಸಲಿದೆ. ಇದರಲ್ಲಿ ಒಂದು ಪಂದ್ಯ ಗೆದ್ದರೂ ಕೂಡ, ಸೂಪರ್ 8ರ ಹಂತಕ್ಕೆ ಭಾರತ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications