ಬಾರ್ಬಡೋಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಭಾರತ ತಂಡ ವಿಶ್ವ ಚಾಂಪಿಯನ್ ಆಗುವಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್‌ನಲ್ಲಿ ಪಡೆದ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು.
ಭಾರತ ಕ್ರಿಕೆಟ್‌ನ ಮಿ.360 ಎಂದು ಕರೆಯಲ್ಪಡುವ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಫೈನಲ್‌ನ ಪಂದ್ಯ ವಿಜೇತ ಆಟಗಾರ. ಕೋಟ್ಯಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯಾಘಾತ ತಡೆದ ಕಾರ್ಡಿಯಾಲಜಿಸ್ಟ್. ಆ ಒಂದು ಕ್ಯಾಚ್ ಪಡೆದ ನಂತರ ಸೂರ್ಯಕುಮಾರ್ ಯಾದವ್‌ಗೆ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದ್ದಾರೆ.

ಭಾರತ ತಂಡ ಟಿ20 ವಿಶ್ವಕಪ್ ಗೆದ್ದ 10 ದಿನಗಳ ನಂತರ, ಸೂರ್ಯಕುಮಾರ್ ಯಾದವ್ ಅವರು ಮಂಗಳವಾರ, ಜುಲೈ 9ರಂದು ಕರ್ನಾಟಕದ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದು, ಕಾಪುವಿನ ಮಾರಿಗುಡಿಗೆ ಸೇವೆ ಸಲ್ಲಿಸಿದ್ದಾರೆ. ಗಮನಾರ್ಹವಾಗಿ, ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಮಂಗಳೂರು ಮೂಲದವರು.
ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ನೆಮ್ಮದಿ ಮತ್ತು ಶಾಂತಿ ಜೀವನದ ಗುರಿ ಎಂದು ಭಕ್ತಿ ಮತ್ತು ವೇದಾಂತವನ್ನು ಮಾತನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಕರ್ನಾಟಕ ಕರಾವಳಿಯ ಅಳಿಯನಾಗಿದ್ದು, ಟಿ20 ವಿಶ್ವಕಪ್ ಬಳಿಕ ಮಂಗಳೂರಿನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿ ಟೆಂಪಲ್ ರನ್ ಮಾಡಿದ್ದಾರೆ.

ಉಡುಪಿ ಜಿಲ್ಲೆ ಕಾಪುವಿನ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಜೊತೆ ಮಾರಿಯಮ್ಮ ಉಚ್ಚಂಗಿ ದೇವಿಯ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು. ದೇವಿಯ ಮುಂದೆ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕನಾಗಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಲಾಯಿತು.
ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಅವರ ತಂದೆ ಮತ್ತು ತಾಯಿ ಕಾಪು ಮಾರಿಗುಡಿಯ ಭಕ್ತರು. ದೇವಿಯ ದರ್ಶನ ಪಡೆದ ನಂತರ ದೇವಿಶಾ ಜನನವಾಯಿತು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಕಾಪು ಮಾರಿಗುಡಿ ಜೊತೆ ಈ ಕುಟುಂಬಕ್ಕೆ ನಂಟಿದೆ.
ದೇವಿಶಾ ಶೆಟ್ಟಿ ತಮ್ಮ ಪತಿ ಸೂರ್ಯಕುಮಾರ್ ಯಾದವ್‌ನನ್ನು ದೇವಿಯ ದರ್ಶನ ಮಾಡಿಸಬೇಕೆಂದು ವಿಶ್ವಕಪ್ ಮುಗಿದ ಕೂಡಲೇ ಕರೆದುಕೊಂಡು ಬಂದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೂ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಮತ್ತು ದೇವಿಶಾ ಶೆಟ್ಟಿ ದಂಪತಿ ಬೃಹದಾಕಾರದ ಕಂಬವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಎಲ್ಲೂ ಕಾಣಸಿಗದ ಕೆಂಪು ಇಳಕಲ್ ಕಲ್ಲಿನಿಂದ ಮಾರಿಗುಡಿ ನಿರ್ಮಾಣವಾಗುತ್ತಿದೆ. ಮರದ ಕೆತ್ತನೆ ಕಂಡು ಸ್ಫೋಟಕ ಬ್ಯಾಟರ್ ನೆಮ್ಮದಿ, ಶಾಂತಿ ಮತ್ತು ಭಕ್ತಿಯ ಮಾತನಾಡಿದ್ದಾರೆ.
ಈ ವೇಳೆ ಮಾತನಾಡಿದ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ ಗೆದ್ದ ಬಳಿಕ ಅಭಿಮಾನಿಗಳ ಸ್ವಾಗತ ಮತ್ತು ತೋರುತ್ತಿರುವ ಪ್ರೀತಿಗೆ ಅಭಾರಿಯಾಗಿದ್ದೇನೆ. ಲೈಫಲ್ಲೇ ಇಷ್ಟು ಕೇಕ್ ಕಟ್ ಮಾಡಿಲ್ಲ, ತಿಂದಿಲ್ಲ ಎಂದರು.
ಮುಂಬೈನಲ್ಲಿ ಟಿ20 ವಿಶ್ವಕಪ್ ವಿಜಯೋತ್ಸವ ಮತ್ತು ಮದುವೆ ವಾರ್ಷಿಕೋತ್ಸವದ ಅನುಭವ ಹಂಚಿಕೊಂಡರು. ಇನ್ನು ಫೈನಲ್‌ನಲ್ಲಿನ ಅವರ ಕ್ಯಾಚ್ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ನಾನು ಬೌಂಡರಿ ಲೈನ್ ತುಳಿದಿಲ್ಲ ಎಂದು ಸೂರ್ಯಕುಮಾರ್ ಯಾದವ್ ಟಾಂಗ್ ನೀಡಿದರು.
"ಜೀವನ ಬಹಳ ದೊಡ್ಡದಿದೆ, ವಿಶ್ವಕಪ್ ಅದರ ಒಂದು ಭಾಗ. ನಾನು ಯಾವತ್ತೂ ಸೆಲೆಬ್ರೆಟಿಯಾಗಲ್ಲ, ಸಾಮಾನ್ಯ ಮನುಷ್ಯನಾಗಿರುತ್ತೇನೆ. ಟೀಮ್ ಇಂಡಿಯಾದ ನಾಯಕನಾಗುವ ಪ್ರಾರ್ಥನೆ ಬಗ್ಗೆ ಮಾತನಾಡಿ, ದೇವರ ಇಚ್ಛೆ, ಹಣೆಬರಹ ಎಂದು ಹೇಳಿ, ಭಾರತ ತಂಡಕ್ಕಾಗಿ ಚೆನ್ನಾಗಿ ಆಡುತ್ತೇನೆ," ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ದೇಗುಲದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಕಾಪು ತಾಲೂಕಿನ ಪರವಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸೂರ್ಯಕುಮಾರ್ ಯಾದವ್ ದಂಪತಿಯನ್ನು ಸನ್ಮಾನಿಸಿದರು.
ಟಿ20 ವಿಶ್ವಕಪ್ ಗೆದ್ದ ನಂತರ ಸೂರ್ಯಕುಮಾರ್ ಯಾದವ್ ಫ್ಯಾನ್ ಫಾಲೋವರ್ಸ್ ಜಾಸ್ತಿಯಾಗಿದ್ದಾರೆ. ದೇವಸ್ಥಾನದಲ್ಲಿ ನೂರಾರು ಜನ ಯುವಕರು ಭಕ್ತರು ಸೆಲ್ಫಿಗಾಗಿ ಮುಗಿಬಿದ್ದರು. ಈ ವೇಳೆ ಸ್ಫೋಟಕ ಬ್ಯಾಟರ್ ತಾಳ್ಮೆಯಿಂದಲೇ ನಡೆದುಕೊಂಡರು.