ಸತತ ಸೋಲಿನಿಂದ ಕಂಗೆಟ್ಟ ಭಾರತ: ಅಫ್ಘಾನ್ ವಿರುದ್ಧ ಗೆಲುವಿನ ಹಾದಿಗೆ ಮರಳಲು ಬಲಿಷ್ಠ ಪ್ಲೇಯಿಂಗ್ XI

ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದ ಟೀಮ್ ಇಂಡಿಯಾ ಆರಂಬದ ಎರಡು ಪಂದ್ಯಗಳನ್ನು ಸೋತಿದೆ. ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆಯದೆಯೇ ಟೂರ್ನಿಯಿಂದ ಹೊರಬೀಳುವ ಆತಂಕವನ್ನು ಎದುರಿಸುತ್ತಿದೆ. ಹಾಗಿದ್ದರೂ ಟೀಮ್ ಇಂಡಿಯಾ ಮುಂದೆ ಸಣ್ಣದೊಂದು ಅವಕಾಶವಿದ್ದು ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆದ್ದು ಉಳಿದ ಪಂದ್ಯಗಳ ಫಲಿತಾಂಶ ಕೂಡ ಟೀಮ್ ಇಂಡಿಯಾಗೆ ಪೂರಕವಾಗಿ ಬಂದರೆ ಸೆಮಿಫೈನಲ್‌ಗೇರುವ ಅವಕಾಶವಿದೆ. ಹೀಗಾಗಿ ಭಾರತ ತಂಡಕ್ಕೆ ಗೆಲಯವಿನ ಜೊತೆಗೆ ಅದೃಷ್ಟವೂ ಬೇಕಿದೆ.
ಇನ್ನು ಟೀಮ್ ಇಂಡಿಯಾ ಈ ವಿಶ್ವಕಪ್‌ನ ಮೂರನೇ ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರ ಅಫ್ಘಾನಿಸ್ತಾನ ಟೀಮ್ ಇಂಡಿಯಾಗೆ ಸವಾಲೊಡ್ಡಲಿದ್ದು ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಅಲ್ಲದೆ ಟೀಮ್ ಇಂಡಿಯಾದ ನೆಟ್‌ರನ್‌ರೇಟ್ ಕೂಡ ಸುಧಾರಿಸುವ ಅನಿವಾರ್ಯತೆಯಿರುವ ಕಾರಣದಿಂದಾಗಿ ಭಾರೀ ಅಂತರದ ಗೆಲುವಿನತ್ತ ತಂಡ ಚಿತ್ತ ನೆಡಬೇಕಿದೆ.
ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಭಾವ್ಯ ಆಡುವ ಬಳಗ ಹೇಗಿದೆ ಎಂಬುದನ್ನು ಮುಂದೆ ಓದಿ..

ಆರಂಭಿಕರಾಗಿ ರಾಹುಲ್-ರೋಹಿತ್
ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಪ್ರಯೋಗವನ್ನು ಮಾಡಲು ಮುಂದಾಗಿ ಕೈ ಸುಟ್ಟುಕೊಂಡಿತ್ತು. ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಆರಂಬಿಕರಾಗಿ ಕಣಕ್ಕಿಳಿದಿದ್ದರು. ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಹಾಗೂ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಈ ಪ್ರಯೋಗ ವೈಫಲ್ಯ ಕಂಡಿತ್ತು. ಈ ಎಲ್ಲಾ ಆಟಗಾರರು ಕೂಡ ರನ್ ಗಳಿಸಲು ವಿಫಲವಾಗಿದ್ದರು. ತಂಡದ ಸೋಲಿಗೆ ಇದು ಪ್ರಮುಖ ಕಾರಣವಾಗಿದೆ. ಹೀಗಾಗಿ ತಂಡದ ಖಾಯಂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರನ್ನೇ ಆರಂಭಿಕರಾಗಿ ಕಣಕ್ಕಿಳಿಸುವುದು ಹೆಚ್ಚು ಸೂಕ್ತವಾಗಿದೆ. ಈ ಇಬ್ಬರಿಂದ ಉತ್ತಮ ಆರಂಭವನ್ನು ತಂಡ ನಿರೀಕ್ಷಿಸುತ್ತದೆ.

ಮಧ್ಯಮ ಕ್ರಮಾಂಕ
ವಿರಾಟ್ ಕೊಹ್ಲಿ, ಇಶಾನ್ ಕಿಶನ್, ರಿಷಭ್ ಪಂತ್: ಇನ್ನು ಮದ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಸೂಕ್ತ. ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಕಣಕ್ಕಿಳಿದರೆ ನಂತರದ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಡಲಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರ ಬಲ ತಂಡಕ್ಕೆ ದೊರೆಯುತ್ತದೆ. ಅಲ್ಲದೆ ಟಿ20 ಮಾದರಿಗೆ ಈ ಆಟಗಾರರು ಹೇಳಿ ಮಾಡಿಸಿದಂತಿರುವ ಕಾರಣ ತಂಡಕ್ಕೆ ಅನುಕೂಲವಾಗಲಿದೆ.

ಆಲ್‌ರೌಂಡರ್‌ಗಳು
ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜಾ; ಟೀಮ್ ಇಂಡಿಯಾ ಪರವಾಗಿ ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 2 ಓವರ್‌ಗಳ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದರು. ಸುದೀರ್ಘ ಕಾಲದ ನಂತರ ಬೌಲಿಂಗ್ ಮಾಡಿದ ಪಾಂಡ್ಯ ಅಫ್ಘಾನಿಸ್ತಾನದ ವಿರುದ್ಧ ಯಶಸ್ಸು ಸಾಧಿಸುವ ನಿರೀಕ್ಷೆಯಿದೆ. ಇನ್ನು ರವೀಂದ್ರ ಜಡೇಜಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನಿಡಲು ವಿಫಲವಾಗಿದ್ದರೂ ಬ್ಯಾಟ್ ಹಾಗೂ ಬಾಲ್ ಎರಡರಲ್ಲಿಯೂ ಜಡೇಜಾ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳು ಇದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಜಡ್ಡು ಆ ಪ್ರದರ್ಶನ ವಿಶ್ವಕಪ್‌ನಲ್ಲಿಯೂ ಮುಂದುವರಿಸಬೇಕಿದೆ.

ಬೌಲಿಂಗ್ ವಿಭಾಗ
ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ : ಟೀಮ್ ಇಂಡಿಯಾದ ಬೌಲಿಂಗ್ ಪಡೆ ಬಲಿಷ್ಠವಾಗಿ ಕಂಡರೂ ಈ ಬಾರಿ ಆಡಿದ ಎರಡು ಪಂದ್ಯಗಳಲ್ಲಿಯೂ ಯಶಸ್ಸು ಪಡೆದಿಲ್ಲ. ಎರಡು ಪಂದ್ಯಗಳಲ್ಲಿ ಜಸ್ಪ್ರೀತ್ ಬೂಮ್ರಾ ಮಾತ್ರವೇ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದು ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಸಂಪಾದಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಬೌಲಿಂಗ್ ಪಡೆಯ ಮೇಲೆ ನಿರೀಕ್ಷೆ ಹೆಚ್ಚಿದೆ. ಶಾರ್ದೂಲ್ ಠಾಕೂರ್ 3ನೇ ವೇಗಿಯಾಗಿ ಅವಕಾಶ ಪಡೆದರೆ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ವೇಗಿಗಳಾಗಿ ತಂಡಕ್ಕೆ ನೆರವಾಗಲಿದ್ದಾರೆ. ಇನ್ನು ಕಳೆದ ಎರಡು ಪಂದ್ಯಗಳಲ್ಲಿಯೂ ವರುಣ್ ಚಕ್ರವರ್ತಿ ಕಣಕ್ಕಿಳಿದಿದ್ದರೂ ವಿಕೆಟ್ ಪಡೆಯಲು ಯಶಸ್ವಿಯಾಗಿರಲಿಲ್ಲ. ಅನುಭವಿ ಆರ್ ಅಶ್ವಿನ್ ಅವರನ್ನು ಆಡಿಸುವ ಮೂಲಕ ತಂಡ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಟೀಮ್ ಇಂಡಿಯಾದ ಸಂಭಾವ್ಯ ತಂಡ
ಟೀಮ್ ಇಂಡಿಯಾದ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ) ಇಶಾನ್ ಕಿಶನ್, ರಿಷಬ್ ಪಂತ್(ವಿಕೆಟ್ ಕೀಪರ್) ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಆರ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications