ಪಾಕ್ ಟೀಮ್ ಇಂಡಿಯಾ ರೀತಿ ಇಲ್ಲ, ಈ ಮೂವರೇ ಬಲಿಷ್ಠರು!; ಪಂದ್ಯ ಗೆಲ್ಲುವ ತಂಡ ಹೆಸರಿಸಿದ ಕನೇರಿಯಾ

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕಳೆದ ಭಾನುವಾರದಿಂದ ಆರಂಭವಾಗಿದ್ದು ಸದ್ಯ ಅರ್ಹತಾ ಸುತ್ತಿನ ಪಂದ್ಯಗಳು ಜರುಗುತ್ತಿವೆ. ಇಂದು ( ಅಕ್ಟೋಬರ್ 22 ) ಟೂರ್ನಿಯ ಅರ್ಹತಾ ಸುತ್ತು ಮುಕ್ತಾಯಗೊಳ್ಳಲಿದ್ದು ನಾಳೆಯಿಂದ ( ಅಕ್ಟೋಬರ್ 23 ) ಸೂಪರ್ 12 ಸುತ್ತು ಆರಂಭಗೊಳ್ಳಲಿದೆ.
ಸೂಪರ್ 12 ಸುತ್ತಿನಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಗ್ರೂಪ್ 2ರಲ್ಲಿದ್ದು ಟೂರ್ನಿಯಲ್ಲಿ ತಮ್ಮ ಮೊದಲನೇ ಪಂದ್ಯದಲ್ಲಿಯೇ ಮುಖಾಮುಖಿಯಾಗುತ್ತಿವೆ. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 12 ಹಂತದ ಪಂದ್ಯ ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ಏರ್ಪಟ್ಟರೆ ಆ ಪಂದ್ಯದ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಎಷ್ಟರ ಮಟ್ಟಿಗಿನ ಕುತೂಹಲ ಮತ್ತು ನಿರೀಕ್ಷೆಗಳು ಹುಟ್ಟುಕೊಳ್ಳುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ.
ಟೂರ್ನಿಯಲ್ಲಿ ಯಾವುದೇ ತಂಡಗಳ ನಡುವೆ ನಡೆಯುವ ಪಂದ್ಯವೂ ಸೃಷ್ಟಿಸಲಾಗದಷ್ಟು ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲವನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹುಟ್ಟುಹಾಕಿಬಿಡುತ್ತದೆ. ಹೀಗಾಗಿಯೇ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ 3 ಪಂದ್ಯಗಳು ನಡೆಯುತ್ತಿದ್ದರೂ ಆ ಪಂದ್ಯಗಳಿಗಿಂತ ಹೆಚ್ಚಾಗಿ ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಆಯ್ಕೆಗಳನ್ನು ತಿಳಿಸಿದ್ದು, ಈ ಸಾಲಿಗೆ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಕೂಡ ಸೇರಿಕೊಂಡಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಒತ್ತಡವನ್ನು ನಿಭಾಯಿಸುವ ತಂಡ ಗೆಲ್ಲಲಿದೆ
"ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿಯಲ್ಲಿ ಯಾವ ತಂಡ ಒತ್ತಡವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ಮೈದಾನದಲ್ಲಿ ಪ್ರದರ್ಶನ ನೀಡಲಿದೆಯೋ ಆ ತಂಡ ಗೆಲುವು ಸಾಧಿಸಲಿದೆ. ಹೇಳಬೇಕೆಂದರೆ, ಭಾರತ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿಯೂ ಗೆಲುವನ್ನು ಸಾಧಿಸಿದೆ. ಆದರೆ ಪಾಕಿಸ್ತಾನ 186 ರನ್ ಗಳಿಸಿದರೂ ಕೂಡ ಸೌತ್ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೋಲನ್ನುಂಡಿದೆ" ಎಂದು ದನೀಶ್ ಕನೇರಿಯಾ ಹೇಳಿದರು.

ಗೆಲ್ಲುವ ಸಾಧ್ಯತೆ 70 - 30
"ಭಾರತದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ ಮತ್ತು ಟೀಮ್ ಇಂಡಿಯಾ ಬೌಲರ್‌ಗಳೂ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ಪಾಕಿಸ್ತಾನ ತಂಡದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುತ್ತಿಲ್ಲ. ಇನ್ನು ಪಾಕಿಸ್ತಾನ ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಅಫ್ರಿದಿ ಮಾತ್ರ ಉತ್ತಮ ಫಾರ್ಮ್ ಹೊಂದಿದ್ದಾರೆ. ಹೀಗಾಗಿ ಭಾರತಕ್ಕೆ ಗೆಲ್ಲುವ ಸಾಧ್ಯತೆ 70% ಇದೆ ಮತ್ತು ಪಾಕಿಸ್ತಾನಕ್ಕೆ ಗೆಲ್ಲುವ ಸಾಧ್ಯತೆ ಕೇವಲ 30% ಇದೆ" ಎಂದು ದನಿಶ್ ಕನೇರಿಯಾ ಹೇಳಿದ್ದಾರೆ.

ಯಾವ ತಂಡ ಟ್ರೋಫಿ ಗೆಲ್ಲಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಹೇಳಿರುವ ದನಿಶ್ ಕನೇರಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬ ಪ್ರಶ್ನೆ ಎದುರಾದಾಗ "ಈ ಬಾರಿಯ ಟ್ವೆಂಟಿ ವಿಶ್ವಕಪ್ ಟ್ರೋಫಿ ಖಂಡಿತವಾಗಿಯೂ ಏಷ್ಯಾಗೆ ಬರಲಿದೆ" ಎಂದಿದ್ದಾರೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಏಷ್ಯಾದ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಭಾಗವಹಿಸುತ್ತಿದ್ದರು ಸಹ ಭಾರತ ಅಥವಾ ಪಾಕಿಸ್ತಾನ ಗೆಲ್ಲಲಿದೆ ಎಂಬರ್ಥದಲ್ಲಿ ದನೀಶ್ ಕನೇರಿಯಾ ಉತ್ತರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications