ನ್ಯೂಜಿಲೆಂಡ್ ವಿರುದ್ಧ ಜಯ ಸುಲಭದ ಮಾತಲ್ಲ; ಭಾರತಕ್ಕೆ ಹಿಂದಿನಿಂದಲೂ ಇದೆ ಈ ದೊಡ್ಡ ಸಮಸ್ಯೆ!

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡಗಳು ತಮ್ಮ ಎರಡನೇ ಪಂದ್ಯವನ್ನು ಇಂದು ( ಅಕ್ಟೋಬರ್ 31 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿವೆ. ಈ ಪಂದ್ಯವು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 28ನೇ ಪಂದ್ಯವಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿದ್ದು, ಈ ಪಂದ್ಯ ಎರಡೂ ತಂಡಗಳಿಗೂ ಸಹ ಅತಿ ಮುಖ್ಯವಾದ ಪಂದ್ಯವಾಗಿದೆ. ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ರೇಸ್‌ನಲ್ಲಿ ಮುಂದುವರಿಯಲಿದ್ದು ಸೋಲುವ ತಂಡ ಬಹುತೇಕ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಕೈಬಿಡುವಂತೆ ಆಗಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳೆರಡೂ ಟೂರ್ನಿಯಲ್ಲಿನ ತಮ್ಮ ಮೊದಲನೇ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಿ ಎರಡೂ ತಂಡಗಳು ಕೂಡ ಸೋಲನ್ನು ಅನುಭವಿಸಿದ್ದವು. ಹೀಗಾಗಿ ಇಂದು ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸಲು ಪ್ರಯತ್ನಿಸಬಹುದು ಇಲ್ಲವಾದರೆ ಸೆಮಿಫೈನಲ್ ಪ್ರವೇಶ ತೀರಾ ಕಷ್ಟಕರವೆನಿಸಲಿದೆ. ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಮಹತ್ವದ ಕಾದಾಟಕ್ಕೆ ಸಾಕ್ಷಿಯಾಗಲಿದ್ದು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಎರಡೂ ತಂಡಗಳ ನಡುವಿನ ಮುಖಾಮುಖಿಯಲ್ಲಿ ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿದೆ ಎಂಬುದರ ಮಾಹಿತಿ ಈ ಕೆಳಕಂಡಂತಿವೆ ಓದಿ.

ಟಿ ಟ್ವೆಂಟಿ ಇತಿಹಾಸದ ಮುಖಾಮುಖಿ ಫಲಿತಾಂಶ
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇದುವರೆಗೂ ಒಟ್ಟು 16 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ 16 ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನ್ಯೂಜಿಲೆಂಡ್ ಕೂಡ 8 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ಇತ್ತಂಡಗಳ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯಲ್ಲಿ ಎರಡೂ ತಂಡಗಳು ಕೂಡ ಸಮಬಲವನ್ನು ಸಾಧಿಸಿವೆ.

ಕೊನೆಯ 5 ಪಂದ್ಯಗಳಲ್ಲಿ ಭಾರತದ್ದೇ ಮೇಲುಗೈ
ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳೆರಡೂ ಸಮಬಲವನ್ನು ಸಾಧಿಸಿವೆ. ಆದರೆ ಎರಡೂ ತಂಡಗಳ ನಡುವೆ ನಡೆದಿರುವ ಕಳೆದ 5 ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾರತ 5 ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ ಮತ್ತು ನ್ಯೂಜಿಲೆಂಡ್ ಯಾವುದೇ ಪಂದ್ಯವನ್ನು ಕೂಡ ಗೆದ್ದಿಲ್ಲ. ಈ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಕೊನೆಯ 5 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ.

ನ್ಯೂಜಿಲೆಂಡ್ ವಿರುದ್ಧ ಭಾರತ ಐಸಿಸಿ ಪಂದ್ಯ ಗೆದ್ದು 18 ವರ್ಷ ಕಳೆದಿವೆ!
ಭಾರತ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದು 18 ವರ್ಷಗಳೇ ಕಳೆದಿವೆ. ಹೌದು 2003ರಲ್ಲಿ ನಡೆದಿದ್ದ ಐಸಿಸಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಇದಾದ ನಂತರ ನಡೆದ ಯಾವುದೇ ಐಸಿಸಿ ಪಂದ್ಯಾವಳಿಯ ಪಂದ್ಯದಲ್ಲಿಯೂ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿಲ್ಲ. ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇದುವರೆಗೂ ಒಟ್ಟು 2 ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಎರಡೂ ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ ತಂಡ ಗೆದ್ದಿದ್ದು ಭಾರತ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications