
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಸೆಣಸಾಟದಲ್ಲಿ ಟೀಮ್ ಇಂಡಿಯಾ ಹಿಂದಿನಿಂದಲೂ ಯಾವುದೇ ಪಂದ್ಯವನ್ನು ಸೋಲದೇ ವಿಶೇಷವಾದ ಇತಿಹಾಸವನ್ನು ನಿರ್ಮಿಸುತ್ತಾ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವಕಪ್ ಪಂದ್ಯವೊಂದರಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದರ ಮೂಲಕ ಇತಿಹಾಸವನ್ನು ತಿರುವಿ ಹಾಕಿದೆ.
ಪಾಕಿಸ್ತಾನದ ಘಟಾನುಘಟಿ ನಾಯಕರುಗಳಿಂದಲೇ ಆಗದಿದ್ದ ಈ ಮಹಾ ಸಾಧನೆಯನ್ನು ಪಾಕಿಸ್ತಾನದ ಪರ ಬಾಬರ್ ಅಜಮ್ ತಮ್ಮ ನಾಯಕತ್ವದಲ್ಲಿ ಮಾಡಿ ತೋರಿಸಿದ್ದಾರೆ. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪ್ರಸಕ್ತ ಸಾಲಿನ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯ ಇಂದು ( ಅಕ್ಟೋಬರ್ 24 ) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇತ್ತ ಟಾಸ್ ಸೋತ ವಿರಾಟ್ ಕೊಹ್ಲಿ ಪಡೆ ಮೊದಲು ಬ್ಯಾಟಿಂಗ್ ಆರಂಭಿಸಿತು, ಭಾರತದ ಪರ ಆರಂಭಿಕ ಆಟಗಾರರು ಎಡವಿದ ನಂತರ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಆಸರೆಯಾದರು. ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರರು ಕೂಡ ದೊಡ್ಡ ಆಟವನ್ನು ಆಡುವಲ್ಲಿ ಯಶಸ್ವಿಯಾಗಲಿಲ್ಲ. ಒಟ್ಟಾರೆ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 152 ರನ್‌ಗಳ ಗುರಿಯನ್ನು ನೀಡಿತು.
ಇನ್ನು ಪಾಕಿಸ್ತಾನದ ವಿರುದ್ಧ ಭಾರತದ ಬೌಲಿಂಗ್ ಪಡೆ ಉತ್ತಮ ಪ್ರದರ್ಶನವನ್ನು ನೀಡಿ ಈ ಮೊತ್ತವನ್ನು ಬಾರಿಸಲು ಬಿಡದೇ ಪಂದ್ಯವನ್ನು ಜಯಗಳಿಸಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಪಾಕಿಸ್ತಾನದ ಆರಂಭಿಕ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಎಲ್ಲಾ ಊಹೆಗಳನ್ನು ತಲೆಕೆಳಗಾಗಿ ಮಾಡಿ ಇತಿಹಾಸವನ್ನೇ ಬದಲಿಸಿ ಪಾಕಿಸ್ತಾನ ತಂಡಕ್ಕಿದ್ದ ಕಳಂಕವನ್ನು ದೂರ ಮಾಡಿದ್ದಾರೆ. ಪಾಕಿಸ್ತಾನ 17.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 152 ರನ್ ಗಳಿಸುವುದರ ಮೂಲಕ ಭಾರತದ ವಿರುದ್ಧ ಭರ್ಜರಿ 10 ವಿಕೆಟ್‍ಗಳ ಜಯವನ್ನು ಸಾಧಿಸಿದೆ.