T20 World Cup 2022: ನೆದರ್ಲ್ಯಾಂಡ್ಸ್ ಎದುರು ಗೆದ್ದು ಬೀಗಿದ ಬಾಂಗ್ಲಾದೇಶ

ಸೋಮವಾರ, ಅಕ್ಟೋಬರ್ 24ರಂದು 2022ರ ಟಿ20 ವಿಶ್ವಕಪ್‌ನ ಸೂಪರ್ 12 ಹಂತದ 5ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಬಾಂಗ್ಲಾದೇಶ 9 ರನ್‌ಗಳ ರೋಚಕ ಜಯ ದಾಖಲಿಸಿತು.
ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 145 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ 20 ಓವರ್‌ಗಳಲ್ಲಿ 135 ರನ್‌ಗಳಿಗೆ ಎಲ್ಲಾ ವಿಕೆಟ್ ಕಲೆದುಕೊಂಡು ಸೋಲೊಪ್ಪಿಕೊಂಡಿತು.
145 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ನಿಯಮಿತ ಅಂತರದಲ್ಲಿ ವಿಕೆಟ್‌ಗಳ ಕಳೆದುಕೊಂಡಿತು. ಆದರೆ ಕಾಲಿನ್ ಅಕರ್‌ಮನ್ 62 ರನ್ ಗಳಿಸಿ ನೆದರ್ಲ್ಯಾಂಡ್ಸ್ ತಂಡದ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ ಅವರು ಗೆಲುವಿನ ದಡವನ್ನು ಸೇರಿಸಲು ಸಾಧ್ಯವಾಗಲಿಲ್ಲ. ತಸ್ಕಿನ್ ಅಹ್ಮದ್ ಅವರ ನಾಲ್ಕು ವಿಕೆಟ್‌ಗಳ ಗೊಂಚಲು ಬಾಂಗ್ಲಾದೇಶದ ಗೆಲುವಿಗೆ ನೆರವಾಯಿತು.
ರನ್ ಚೇಸ್‌ನಲ್ಲಿ ಕಳಪೆ ಆರಂಭವನ್ನು ಪಡೆದ ನೆದರ್ಲ್ಯಾಂಡ್ಸ್ ಆರಂಭಿಕ ಎರಡು ಎಸೆತಗಳಲ್ಲಿ ತಸ್ಕಿನ್ ಅಹ್ಮದ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡರು. ನಂತರ 15 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನೆದರ್ಲ್ಯಾಂಡ್ಸ್ 135 ರನ್‌ಗಳಿಗೆ ಆಲೌಟ್
ಕಾಲಿನ್ ಅಕರ್‌ಮನ್ 48 ಎಸೆತಗಳಲ್ಲಿ 62 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಅವರ ಚೊಚ್ಚಲ ಟಿ20 ಅರ್ಧಶತಕ ಗಳಿಸುತ್ತಿರುವಾಗಲೇ ಇನ್ನೊಂದು ಬದಿ ವಿಕೆಟ್ ಬೀಳುತ್ತಲೇ ಇದ್ದವು ಮತ್ತು ಅಂತಿಮ ಎಸೆತದಲ್ಲಿ ನೆದರ್ಲ್ಯಾಂಡ್ಸ್ 135 ರನ್‌ಗಳಿಗೆ ಆಲೌಟ್ ಆಯಿತು.
ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ ತಸ್ಕಿನ್ ಅಹ್ಮದ್ 4 ಓವರ್‌ಗಳಲ್ಲಿ 25 ರನ್ ನೀಡಿ 4 ವಿಕೆಟ್ ಪಡೆದರು. ಹಸನ್ ಮಹಮೂದ್ 4 ಓವರ್‌ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಶಕೀಬ್ ಅಲ್ ಹಸನ್ ಮತ್ತು ಸೌಮ್ಯ ಸರ್ಕಾರ್ ತಲಾ ಒಂದೊಂದು ವಿಕೆಟ್ ಪಡೆದರು.

ನೆದರ್ಲ್ಯಾಂಡ್ಸ್ ತಂಡಕ್ಕೆ ಭಾರೀ ಹಿನ್ನಡೆ
ಬಲಿಷ್ಠ ಎದುರಾಳಿಗಳಾದ ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಗುಂಪಿನಲ್ಲಿ ಎರಡು ಅಂಕಗಳೊಂದಿಗೆ ಸೋಲು ನೆದರ್ಲ್ಯಾಂಡ್ಸ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಆದರೆ ಸೂಪರ್ 12ಗೆ ನೇರವಾಗಿ ಅರ್ಹತೆ ಪಡೆದಿರುವ, ಆದರೆ 2021ರ ವಿಶ್ವಕಪ್‌ನಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಬಾಂಗ್ಲಾದೇಶಕ್ಕೆ ಇಂದು ನಿರಾಳವಾಗಿದೆ. ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಡುವ ಮೊದಲು 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 14 ಪಂದ್ಯ ಸೋತಿದೆ.

ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ ಕೇವಲ 144 ರನ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ತಂಡವು ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲ್ಯಾಂಡ್ಸ್ ತಂಡದ ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು.
ಫ್ರೆಡ್ ಕ್ಲಾಸೆನ್ ಅವರ ಆರಂಭಿಕ ಓವರ್‌ನಲ್ಲಿ 12 ರನ್ ಗಳಿಸಿತು. ಅಫೀಫ್ ಹೊಸೈನ್ (38) ಮತ್ತು ನೂರುಲ್ ಹಸನ್ (13) 44 ರನ್ ಜೊತೆಯಾಟ ನೀಡಿದ ನಂತರ ಈ ಜೋಡಿಯನ್ನು ಡಿ ಲೀಡೆ ಒಂದೇ ಓವರ್‌ನಲ್ಲಿ ಇಬ್ಬರನ್ನೂ ಔಟ್ ಮಾಡಿದರು.
ನೆದರ್ಲ್ಯಾಂಡ್ಸ್ ತಂಡದ ಪ್ರಭಾವಿ ಬೌಲಿಂಗ್ ದಾಳಿಯ ಹೊರತಾಗಿಯೂ ಬಾಂಗ್ಲಾದೇಶ ತಂಡದ ಬ್ಯಾಟರ್‌ಗಳು ಪ್ರತಿರೋಧ ಒಡ್ಡಿದರು. ಬಾಸ್ ಡಿ ಲೀಡೆ ಮತ್ತು ಪಾಲ್ ವ್ಯಾನ್ ಮೀಕೆರೆನ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಡುವೆ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಗಳಿಸಿತು.

ಬಾಂಗ್ಲಾದೇಶ ಉತ್ತಮ ಆರಂಭವನ್ನೇ ಪಡೆಯಿತು
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಉತ್ತಮ ಆರಂಭವನ್ನೇ ಪಡೆಯಿತು. 5 ಓವರ್‌ಗಳಲ್ಲಿ 43 ರನ್ ಗಳಿಸಿದ್ದಾಗ ಸೌಮ್ಯ ಸರ್ಕಾರ್ (14) ವಿಕೆಟ್ ಕಳೆದುಕೊಂಡಿತು. ನಂತರ ಅಲ್ಲಿಂದ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಇನ್ನೊಬ್ಬ ಆರಂಭಿಕ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೊ (25) ರನ್ ಗಳಿಸಿದರು.
ನಂತರ ಬಂದ ಲಿಟ್ಟನ್ ದಾಸ್ (9), ನಾಯಕ ಶಕೀಬ್ ಅಲ್ ಹಸನ್ (7), ಅಫೀಫ್ ಹೊಸೈನ್ (38), ಯಾಸಿರ್ ಅಲಿ (3), ನೂರುಲ್ ಹಸನ್ (13), ಮೊಸದ್ದೆಕ್ ಹೊಸೈನ್ (ಅಜೇಯ 20) ರನ್ ಗಳಿಸಿದರು.
ನೆದರ್ಲ್ಯಾಂಡ್ಸ್ ತಂಡದ ಪರ ಬಾಸ್ ಡಿ ಲೀಡೆ 3 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಪಾಲ್ ವ್ಯಾನ್ ಮೀಕೆರೆನ್ 4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಕಿತ್ತರು. ಇನ್ನುಳಿದಂತೆ ಫ್ರೆಡ್ ಕ್ಲಾಸೆನ್, ಟಿಮ್ ಪ್ರಿಂಗಲ್, ಶರೀಜ್ ಅಹ್ಮದ್, ಲೋಗನ್ ವ್ಯಾನ್ ಬೀಕ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications