
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಭಾರತದ ಆಡುವ 11ರ ಬಳಗ
ರೋಹಿತ್ ಶರ್ಮಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಅಭಿಯಾನದಲ್ಲಿ ಅತ್ಯುತ್ತಮ ಫಾರ್ಮ್ ಅನ್ನು ತೋರಿಸಿಲ್ಲ. ಈ ಪಂದ್ಯಾವಳಿಯಲ್ಲಿ ಅವರ ಹೆಸರಿನಲ್ಲಿ ಕೇವಲ ಒಂದು ಅರ್ಧ ಶತಕ ಮಾತ್ರ ಬಂದಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ರೋಹಿತ್ ಫಾರ್ಮ್‌ಗೆ ಮರಳಲು ಪರಿಪೂರ್ಣ ಅವಕಾಶವಾಗಿದೆ.
ಕೆಎಲ್ ರಾಹುಲ್: ಕಳೆದ ಎರಡು ಪಂದ್ಯಗಳಲ್ಲಿ ಸತತ ಎರಡು ಅರ್ಧಶತಕಗಳೊಂದಿಗೆ ಕೆಎಲ್ ರಾಹುಲ್ ಫಾರ್ಮ್‌ಗೆ ಮರಳಿದ್ದಾರೆ. ಇದಕ್ಕೂ ಮೊದಲು ಮೂರು ಪಂದ್ಯಗಳಲ್ಲಿ ಕಳಪೆ ಆರಂಭ ಕಂಡಿದ್ದರು. ಭಾರತ ಸೆಮಿಫೈನಲ್‌ನಲ್ಲಿ ಗೆಲ್ಲಬೇಕಾದರೆ ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ದೊಡ್ಡ ಮೊತ್ತ ಗಳಿಸಬೇಕಿದೆ, ಅದೂ ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಎಂಬುದನ್ನು ಮರೆಯುವಂತಿಲ್ಲ.

ವಿರಾಟ್ ಕೊಹ್ಲಿ 5 ಪಂದ್ಯಗಳಲ್ಲಿ 246 ರನ್
ವಿರಾಟ್ ಕೊಹ್ಲಿ: ಭಾರತೀಯ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್‌ಮನ್, ರನ್ ಮಷಿನ್ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿ ಮುಂದುವರೆಯುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ 5 ಪಂದ್ಯಗಳಲ್ಲಿ 246 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ವೈಯಕ್ತಿಕ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅವರ ಬ್ಯಾಟಿಂಗ್ ಭಾರತದ ಪ್ರಶಸ್ತಿ ಕನಸಿಗೆ ಮುಖ್ಯವಾಗಿದೆ.
ಸೂರ್ಯಕುಮಾರ್ ಯಾದವ್: ವಿರಾಟ್ ಕೊಹ್ಲಿಗೆ ಸ್ಪರ್ಧೆ ಎಂಬಂತೆ ಬಿಗ್ ಹಿಟ್ಟರ್ ಸೂರ್ಯಕುಮಾರ್ ಮತ್ತೊಂದು ತುದಿಯಲ್ಲಿ ಭಾರತದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಸದ್ಯ ವಿಶ್ವದ ಪ್ರತಿಯೊಬ್ಬ ಬೌಲರ್‌ಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ಅವರನ್ನು ಕಟ್ಟಿಹಾಕುವುದು ಇಂಗ್ಲೆಂಡ್‌ಗೆ ಪ್ರಮುಖವಾಗಿದೆ ಮತ್ತು ಅವರ ನಾಯಕ ಜೋಸ್ ಬಟ್ಲರ್‌ಗೂ ಈ ಸತ್ಯ ಅರ್ಥವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಸಿಡಿದರೆ ಭಾರತ ಬೃಹತ್ ಸ್ಕೋರ್ ನಿರ್ಮಿಸುವುದರಲ್ಲಿ ಸಂಶಯವಿಲ್ಲ.

ಕಾರ್ತಿಕ್ ಮತ್ತು ರಿಷಭ್ ಪಂತ್ ನಡುವೆ ಪೈಪೋಟಿ
ಹಾರ್ದಿಕ್ ಪಾಂಡ್ಯ: ಭಾರತದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತದ ಎಲ್ಲಾ ಮೂರು ವಿಭಾಗಗಳಲ್ಲಿ ಆಟವಾಡಿದ್ದಾರೆ. ಆದಾಗ್ಯೂ, ಅವರು ಫಿನಿಶರ್ ಆಗಿ ಕಂಡುಬಂದಿಲ್ಲ. ನಿರ್ಣಾಯಕ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಗ್ರ ಪ್ರದರ್ಶನ ಬರಬೇಕೆಂದು ಕೋಟ್ಯಂತರ ಭಾರತೀಯರ ಬಯಕೆಯಾಗಿದೆ.
ರಿಷಭ್ ಪಂತ್: ವಿಕೆಟ್ ಕೀಪರ್ ಸ್ಥಾನಕ್ಕಾಗಿ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ನಡುವೆ ಪೈಪೋಟಿ ಇರಲಿದೆ. ವಿಶೇಷವಾಗಿ ಇಂಗ್ಲೆಂಡ್ ವಿರುದ್ಧ ಅನುಭವಿ ಬ್ಯಾಟರ್‌ಗಿಂತ ರಿಷಭ್ ಪಂತ್‌ಗೆ ಆದ್ಯತೆ ನೀಡಬಹುದು. ಎಡಗೈ ಬ್ಯಾಟ್ಸ್‌ಮನ್ ಕೂಡ ಆಗಿರುವ ಕಾರಣ ಕಾರ್ತಿಕ್‌ಗಿಂತ ಪಂತ್ ಚಾನ್ಸ್ ತೆಗೆದುಕೊಳ್ಳಲಿದ್ದಾರೆ.

ಕೆಳ ಕ್ರಮಾಂಕದಲ್ಲಿ ರನ್ ಗಳಿಸುವ ಸಾಮರ್ಥ್ಯವಿರುವ ಅಕ್ಷರ್
ಅಕ್ಷರ್ ಪಟೇಲ್: ಅಕ್ಷರ್ ಪಟೇಲ್ ಆಲ್‌ರೌಂಡರ್ ಆಗಿದ್ದರೂ, ಈವರೆಗೆ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಇಂಗ್ಲೆಂಡ್ ವಿರುದ್ಧ ಅಕ್ಷರ್ ಅವರನ್ನು ಕೈಬಿಡುವ ನಿರೀಕ್ಷೆಯಿಲ್ಲ. ಅವರ ಎಡಗೈ ಸ್ಪಿನ್ ಬೌಲಿಂಗ್, ಕೆಳ ಕ್ರಮಾಂಕದಲ್ಲಿ ರನ್ ಗಳಿಸುವ ಸಾಮರ್ಥ್ಯದೊಂದಿಗೆ ಭಾರತಕ್ಕೆ ಹೆಚ್ಚು ಉಪಯೋಗವಾಗಲಿದ್ದಾರೆ.
ರವಿಚಂದ್ರನ್ ಅಶ್ವಿನ್: ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒತ್ತಡವನ್ನು ತೆಗೆದುಕೊಳ್ಳುವ ಮತ್ತು ಸಂದಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದು ರೋಹಿತ್ ಬಳಗಕ್ಕೆ ದೊಡ್ಡ ಮುನ್ನಡೆ ತಂದುಕೊಡಲಿದೆ.

ಎದುರಾಳಿ ನಾಯಕನನ್ನು ಕಟ್ಟಿಹಾಕಲು ಭುವನೇಶ್ವರ್ ಭಾರತದ ಪ್ರಮುಖ ಅಸ್ತ್ರ
ಭುವನೇಶ್ವರ್ ಕುಮಾರ್: ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ವಿರುದ್ಧ ಸಾಂಪ್ರದಾಯಿಕವಾಗಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಓವರ್‌ಗಳಲ್ಲಿ ಎದುರಾಳಿ ನಾಯಕನನ್ನು ಕಟ್ಟಿಹಾಕಲು ಭಾರತದ ಪ್ರಮುಖ ಅಸ್ತ್ರವಾಗಿದ್ದಾರೆ.
ಮೊಹಮ್ಮದ್ ಶಮಿ: ಇದುವರೆಗಿನ ಈ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಅಗ್ರ ವಿಕೆಟ್ ಟೇಕರ್ ಅಲ್ಲದಿದ್ದರೂ, ರನ್ ನಿಯಂತ್ರಿಸುವಲ್ಲಿ ಪ್ರಮುಖ ಬೌಲರ್ ಆಗಿದ್ದಾರೆ. ದೊಡ್ಡ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ನೆರವಾಗುವ ನಿರೀಕ್ಷೆ ಇದೆ.
ಅರ್ಶ್‌ದೀಪ್ ಸಿಂಗ್: 2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಎಲ್ಲ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿರುವ ಏಕೈಕ ಬೌಲರ್ ಎಂದರೆ ಅರ್ಶ್‌ದೀಪ್ ಸಿಂಗ್. 5 ಪಂದ್ಯಗಳಿಂದ ಇಲ್ಲಿಯವರೆಗೆ 10 ವಿಕೆಟ್‌ಗಳನ್ನು ಗಳಿಸಿದ್ದಾರೆ.


Click it and Unblock the Notifications
