
ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿದ ಬಳಿಕ ರೋಹಿತ್ ಪಡೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದ್ರಲ್ಲೂ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ ಮೆಚ್ಚಿದ ಕ್ರಿಕೆಟ್ ಪ್ರೇಮಿಗಳು, ಕ್ರಿಕೆಟ್ ದಿಗ್ಗಜರು, ಸಿನಿಮಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕೊಹ್ಲಿಗೆ ಶುಭಾಶಯ ಕೋರಿದ್ದಾರೆ.
53 ಎಸೆತಗಳಲ್ಲಿ ಅಜೇಯ 82 ರನ್ ಕಲೆಹಾಕುವ ಮೂಲಕ ಭಾರತಕ್ಕೆ ಗೆಲುವಿನ ಸಿಹಿ ಉಣಿಸಿದ ವಿರಾಟ್ ಕೊಹ್ಲಿ ಆಟಕ್ಕೆ ಮೆಚ್ಚದೆ ಉಳಿದಿರುವ ಪ್ರೇಕ್ಷಕರೇ ಇಲ್ಲ. ಪಾಕ್ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ ತನ್ನ ಅದ್ಭುತ ಇನ್ನಿಂಗ್ಸ್ ಮೂಲಕ ಎದುರಾಳಿಯನ್ನು ಗೆಲ್ಲುವ ಆಟ ಪ್ರದರ್ಶಿಸಿದ್ರು.
ವಿರಾಟ್ ಕೊಹ್ಲಿ ಅದ್ಭುತ ಆಟವನ್ನ ಮೆಚ್ಚಿ ಅನೇಕ ಸೆಲೆಬ್ರೆಟಿಗಳು ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಕಿಂಗ್ ಕೊಹ್ಲಿಗೆ ಶುಭ ಕೋರಿದ್ದಾರೆ. ಇದ್ರಿಂದ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಕೂಡ ಹೊರತಾಗಿಲ್ಲ.
ಸಿನಿಮಾ ತಾರೆ ಅಷ್ಟೇ ಅಲ್ಲದೆ, ಕ್ರಿಕೆಟ್ ಪ್ರೇಮಿಯು ಆಗಿರುವ ಕಿಚ್ಚ ಸುದೀಪ್ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯ ವೀಕ್ಷಿಸಲೆಂದೆ ಆಸ್ಟ್ರೇಲಿಯಾಗೆ ತೆರಳಿದ್ದರು. ಭಾನುವಾರ ನಡೆದ ಭಾರತ-ಪಾಕ್ ಪಂದ್ಯವನ್ನ ಎಂಸಿಜಿ ಮೈದಾನದಲ್ಲೇ ನೇರವಾಗಿ ಕಣ್ತುಂಬಿಕೊಂಡ ಕಿಚ್ಚ ಸುದೀಪ್ ಟೀಂ ಇಂಡಿಯಾ ಆಟವನ್ನ ಎಂಜಾಯ್ ಮಾಡಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅತ್ಯದ್ಭುತ ಇನ್ನಿಂಗ್ಸ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ.
ಸುದೀಪ್ ತಮ್ಮ ಟ್ವೀಟ್‌ನಲ್ಲಿ '' ಮಹಾರಾಜ ಎಲ್ಲಿದ್ದರೂ ಮಹಾರಾಜ ತಾನೇ... ಕಿಂಗ್ ರಿಮೈನ್ಸ್ ಕಿಂಗ್, ಕಿಂಗ್ ಕೊಹ್ಲಿ, ವಿರಾಟ್ ಕೊಹ್ಲಿ ಸ್ಟೇಡಿಯಂನಲ್ಲಿ ಲೈವ್ ಆಗಿ ನಿಮ್ಮ ಇನ್ನಿಂಗ್ಸ್ ನೋಡಿದ್ದು ದೊಡ್ಡ ಗೌರವವಾಗಿದೆ. ಹ್ಯಾಟ್ ಆಫ್ ಹಾರ್ದಿಕ್ ಪಾಂಡ್ಯ... ನಿಮ್ಮ ತಾಳ್ಮೆ ಮತ್ತು ಪ್ರದರ್ಶನವಿಲ್ಲದಿದ್ರೆ ಇದು ಸಾಧ್ಯವಾಗುತ್ತಿರಲಿಲ್ಲ. ಹ್ಯಾಟ್ಸ್ ಆಫ್ ಟು ಟೀಂ ಇಂಡಿಯಾ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅನ್ನು ಮೆಚ್ಚಿ ಟ್ವೀಟ್ ಮಾಡಿದ್ದು, ಇಂತಹ ಸನ್ನಿವೇಶದಲ್ಲಿ ನಮ್ಮನ್ನು ಇಲ್ಲಿರಿಸಿದ್ಕಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ. ಒತ್ತಡದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮವಾಗಿ ಆಡುವವರು ಇಲ್ಲ. ವಿರಾಟ್ ಕೊಹ್ಲಿ ಈ ಅವಿಸ್ಮರಣೀಯ ಗೆಲುವಿಗೆ ಭಾರತವನ್ನು ಮುನ್ನಡೆಸಿದರು ಎಂದು ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದಾರೆ.
ಹೀಗೆ ಸುದೀಪ ಅಷ್ಟೇ ಅಲ್ಲದೆ ಅನೇಕ ತಾರೆಯರು ಭಾರತ-ಪಾಕ್ ರೋಚಕ ಪಂದ್ಯವನ್ನ ವೀಕ್ಷಿಸಿ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಅನೇಕ ಕ್ರಿಕೆಟ್ ತಾರೆಯರು, ಮಾಜಿ ಕ್ರಿಕೆಟಿಗರು ಸಹ ಭಾರತದ ಪ್ರದರ್ಶನವನ್ನ ಮೆಚ್ಚಿ ಹಾಡಿ ಹೊಗಳಿದ್ದಾರೆ.