
ಟಿ20 ವಿಶ್ವಕಪ್ ಅಂತಿಮ ಘಟ್ಟವನ್ನು ತಲುಪಿದ್ದು ಭಾನುವಾರ ಫೈನಲ್ ಮುಖಾಮುಖಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ಮಧ್ಯೆ ನಡೆಯಲಿದೆ. ಮೆಲ್ಬರ್ನ್‌ನಲ್ಲಿರುವ ಐತಿಹಾಸಿಕ ಕ್ರೀಡಾಂಗಣ ಎಂಸಿಜಿಯಲ್ಲಿ ಈ ಈ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ಟ್ರೋಫಿಗೆ ಮುತ್ತಿಕ್ಕುವ ತಂಡ ಯಾವುದು ಎಂಬ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದ್ದು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿ ಮಣಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಇಂಗ್ಲೆಂಡ್ ತಂಡ ಭಾರತಕ್ಕೆ ಸೋಲುಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಆದರೆ ಫೈನಲ್ ಪಂದ್ಯ ನಿಗದಿಯಾಗಿರುವ ಭಾನುವಾರ ಮೆಲ್ಬರ್ನ್ ಪರಿಸರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳು ಇರುವುದರಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾಗುಯವ ಸಾಧ್ಯತೆ ದಟ್ಟವಾಗಿದೆ. ಆದರೆ ಮೀಸಲು ದಿನ ಇರುವ ಕಾರಣ ಭಾನುವಾರ ಸಂಪೂರ್ಣವಾಗಿ ಪಂದ್ಯ ಮಳೆಗೆ ಆಹುತಿಯಾದರೂ ಸೋಮವಾರ ಪಂದ್ಯವನ್ನು ಮುಂದುವರಿಸುವ ಅವಕಾಶವಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಪ್ರತಿಕೂಲ ಹವಾಮಾನದಿಂದಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಮಳೆಯ ಕಾರಣದಿಂದಾಗಿ ಅನೇಕ ಪಂದ್ಯಗಳು ಈ ಬಾರಿಯ ಟೂರ್ನಿಯಲ್ಲಿ ರದ್ದಾಗಿದೆ. ಇದು ಗ್ರೂಪ್ ಹಂತದಲ್ಲಿ ಹಲವು ತಂಡಗಳ ಫಲಿತಾಂಶದ ಮೇಲೆ ಹಾಗೂ ಮುಂದಿನ ಹಂತಕ್ಕೇರುವ ಅವಕಾಶದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಹೀಗಾಗಿ ವಿಶ್ವಕಪ್ ಟೂರ್ನಿ ಆಯೋಜಕರ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ಕೇಳಿ ಬಂದಿದೆ.
ಇದೀಗ ಆಸ್ಟ್ರೇಲಿಯಾದ ಸರ್ಕಾರಿ ಸ್ವಾಮ್ಯದ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಭಾನುವಾರ ಮೆಲ್ಬರ್ನ್ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಶೇಕಡಾ 100ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಲ್ಲದೆ ಸಿಡಿಲಿನಿಂದ ಕೂಡಿದ ಮಳೆಯ ನಿರೀಕ್ಷೆಯಿದೆ.
ಪಾಕಿಸ್ತಾನ ಸ್ಕ್ವಾಡ್ ಹೀಗಿದೆ: ಬಾಬರ್ ಅಜಂ (ನಾಯಕ), ಶದಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಶಾನ್ ಮಸೂದ್, ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್
ಇಂಗ್ಲೆಂಡ್ ಸ್ಕ್ವಾಡ್: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್, ಟೈಮಲ್ ಮಿಲ್ಸ್