ಜೂನ್ 14 ಶುಕ್ರವಾರ, 20 ವಿಶ್ವಕಪ್ 2024ರ ಲೀಗ್ ಹಂತದ 29ನೇ ಪಂದ್ಯ ವೆಸ್ಟ್ ಇಂಡೀಸ್ನ ಟ್ರಿನಿಡಾಡ್ದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಇಂದು ಸಿ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ಪಪುವಾ ನ್ಯೂಗಿನಿಯಾ ನಡುವೆ ನಡೆಯಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 7 ವಿಕೆಟ್ಗಳಿಂದ ಗೆದ್ದು ಸೂಪರ್-8ರಲ್ಲಿ ಸ್ಥಾನ ಗಳಿಸಿತು.
ಇದರೊಂದಿಗೆ ನ್ಯೂಜಿಲೆಂಡ್ನಂತಹ ಬಲಿಷ್ಠ ತಂಡವನ್ನು ಸೂಪರ್-8 ರೇಸ್ನಿಂದ ಅಫ್ಘಾನಿಸ್ತಾನ ಹೊರ ಹಾಕಿದೆ. 'ಸಿ' ಗುಂಪಿನಿಂದ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್-8ಗೆ ಪ್ರವೇಶ ಪಡೆದಿದ್ದರೆ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಉಗಾಂಡ ತಂಡಗಳು ಹೊರಬಿದ್ದಿವೆ.

ಅಫ್ಘಾನಿಸ್ತಾನ ಎದುರು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂಗಿನಿ 19.5 ಓವರ್ಗಳಲ್ಲಿ 95 ರನ್ಗಳಿಗೆ ಆಲೌಟ್ ಆಯಿತು. ಪಪುವಾ ನ್ಯೂಗಿನಿ ತಂಡದ ಪರ ಕಿಪ್ಲಿನ್ ಡೋರಿಗಾ 27 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು.
ಡೋರಿಗಾ ಎದುರಿಸಿ 32 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 27 ರನ್ ಗಳಿಸಿದರು. ಇವರಲ್ಲದೆ ಎಲಿ ನೌ 19 ಎಸೆತಗಳಲ್ಲಿ 2 ಬೌಂಡರಿ ಸಹಿತ 13 ರನ್ ಹಾಗೂ ಟೋನಿ ಉರಾ 18 ಎಸೆತಗಳಲ್ಲಿ 1 ಬೌಂಡರಿ ಸಹಿತ 11 ರನ್ ಗಳಿಸಿದರು. ಈ ಬ್ಯಾಟರ್ಗಳ ರನ್ಗಳಿಂದಾಗಿ ಪಪುವಾ ನ್ಯೂಗಿನಿ 95 ರನ್ಗಳಿಗೆ ತಲುಪಲು ಸಾಧ್ಯವಾಯಿತು.
ಅಫ್ಘಾನಿಸ್ತನ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ಫಜಲ್ಹಕ್ ಫಾರೂಕಿ 3 ವಿಕೆಟ್ ಪಡೆದರು. ನವೀನ್ ಉಲ್ ಹಕ್ 2 ಹಾಗೂ ನೂರ್ ಅಹ್ಮದ್ 1 ವಿಕೆಟ್ ಕಬಳಿಸಿದರು. ಈ ಪಂದ್ಯ ಪಪುವಾ ನ್ಯೂಗಿನ ತಂಡದ 4 ಬ್ಯಾಟರ್ ರನೌಟ್ ಆದರು.
ಪಪುವಾ ನ್ಯೂಗಿನಿಯಾ ನೀಡಿದ 96 ರನ್ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ಗುಲ್ಬದಿನ್ ನೈಬ್ ಮತ್ತು ಮೊಹಮ್ಮದ್ ನಬಿ ಸ್ಫೋಟಕ ಇನಿಂಗ್ಸ್ ಆಡಿದರು. ಇಬ್ರಾಹಿಂ ಝದ್ರಾನ್ ಶೂನ್ಯಕ್ಕೆ ಔಟ್ ಆದರೆ, ರಹಮಾನುಲ್ಲಾ ಗುರ್ಬಾಜ್ 11 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಇದಾದ ಬಳಿಕ ಅಜ್ಮತುಲ್ಲಾ ಉಮರ್ಜಾಯ್ ಕೂಡ 13 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಗುಲ್ಬದಿನ್ ನೈಬ್ ಮತ್ತು ಮೊಹಮ್ಮದ್ ನಬಿ ಅಫ್ಘಾನಿಸ್ತಾನಕ್ಕೆ ಅದ್ಭುತ ಇನ್ನಿಂಗ್ಸ್ ಜಯ ತಂದು ಕೊಟ್ಟರು. ನೈಬ್ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 44 ರನ್ ಹಾಗೂ ನಬಿ 23 ಎಸೆತಗಳಲ್ಲಿ 1 ಬೌಂಡರಿ ಸಹಿತ ಅಜೇಯ 16 ರನ್ ಗಳಿಸಿದರು.
ಪಪುವಾ ನ್ಯೂಗಿನಿ ಪರ ಲೀ ನಾವೊ, ಸೆಮೊ ಕಮಿಯಾ ಮತ್ತು ನಾರ್ಮನ್ ವನುವಾ 1-1 ವಿಕೆಟ್ ಪಡೆದರು.
ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
ಪಪುವಾ ನ್ಯೂಗಿನಿ ತಂಡ: ಟೋನಿ ಉರಾ, ಅಸ್ಸಾದ್ ವಾಲಾ (ನಾಯಕ), ಲೆಗಾ ಸಿಯಾಕಾ, ಸೆಸೆ ಬೌ, ಹಿರಿ ಹಿರಿ, ಚಾಡ್ ಸೋಪರ್, ಕಿಪ್ಲಿನ್ ಡೋರಿಗಾ (ವಿ.ಕೀ), ನಾರ್ಮನ್ ವನುವಾ, ಅಲೀ ನಾವೊ, ಜಾನ್ ಕರಿಕೊ, ಸೆಮೊ ಕಮಿಯಾ.