ನವದೆಹಲಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದ್ದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. ರಶೀದ್ ಖಾನ್ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡ ಅದ್ಭುತ ಪ್ರದರ್ಶನದೊಂದಿಗೆ ಸೆಮಿಫೈನಲ್ ಪ್ರವೇಶಿಸಿತ್ತು.
ಟೂರ್ನಿಯುದ್ದಕ್ಕೂ ಅಫ್ಘಾನಿಸ್ತಾನ ಬಲಿಷ್ಠ ತಂಡಗಳಿಗೆ ಸೋಲಿನ ಶಾಕ್ ನೀಡಿತ್ತು. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್‌ನಂತಹ ತಂಡಗಳ ವಿರುದ್ಧ ಅಫ್ಘಾನಿಸ್ತಾನ ಗೆದ್ದು ಬೀಗಿತ್ತು. ಆದರೆ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹೀನಾಯವಾಗಿ ಅಫ್ಘಾನಿಸ್ತಾನ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಮೊಟ್ಟ ಮೊದಲ ಬಾರಿಗೆ ಐಸಿಸಿ ಟುರ್ನಿಯೊಂದರಲ್ಲಿ ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನ ತಂಡವು ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಅಫ್ಘಾನಿಸ್ತಾನ ಫೈನಲ್ ತಲುಪಲು ಸಾಧ್ಯವಾಗದ ಕಾರಣ ಆಟಗಾರರು ಸೇರಿದಂತೆ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳ ಕನಸು ಭಗ್ನಗೊಂಡಿತ್ತು. ಆದರೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ವರದಿಯೊಂದು ಹೊರಬಿದ್ದಿದ್ದು, ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಟಿ20 ವಿಶ್ವಕಪ್ 2024ರ ಟೂರ್ನಿಗೆ ಬಳಸಿದ ಪಿಚ್‌ಗಳಿಗೆ ಐಸಿಸಿ ರೇಟಿಂಗ್ ನೀಡಿದೆ. ಈ ವೇಳೆ ಭಯಾನಕ ಸತ್ಯವೊಂದನ್ನು ಐಸಿಸಿ ಬಿಚ್ಚಿಟ್ಟಿದೆ. ಈ ವರದಿಯ ಪ್ರಕಾರ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಮಿಫೈನಲ್ ಪಂದ್ಯದ ಪಿಚ್ ಅನ್ನು 'ಅತೃಪ್ತಿಕರ' ಎಂದು ಐಸಿಸಿ ರೇಟ್ ಮಾಡಿದೆ. ಅಂದರೆ ಈ ಪಿಚ್ ಪಂದ್ಯ ಆಡಲು ಯೋಗ್ಯವಲ್ಲ ಮತ್ತು ಆ ಪಿಚ್ ನಲ್ಲಿ ಪಂದ್ಯ ನಡೆಯಬಾರದಿತ್ತು ಎಂಬುವುದಾಗಿದೆ. ಈ ಸತ್ಯ ಬೆಳಕಿಗೆ ಬರುತ್ತಿದ್ದಂತೆ ಅಫ್ಘಾನಿಸ್ತಾನ ಆಟಗಾರರು ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ.
ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ನಡೆದಿತ್ತು. ಟೂರ್ನಿಯುದ್ದಕ್ಕೂ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು.

ಆದರೆ, ಅಫ್ಘಾನ್ ತಂಡದಿಂದ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 8.5 ಓವರ್‌ಗಳಲ್ಲಿ ಗೆದ್ದು ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಇತ್ತ ಅಫ್ಘಾನಿಸ್ತಾನ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿತ್ತು.
ಇದಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಗುಂಪು ಹಂತದ ಪಂದ್ಯ ಪಿಚ್ ಬಗ್ಗೆ ಕೂಡ ಐಸಿಸಿ ರೇಟ್ ಮಾಡಿದೆ. ನ್ಯೂಯರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಈ ಪಿಚ್‌ನಲ್ಲಿ ಉಭಯ ತಂಡಗಳ ಬ್ಯಾಟರ್‌ಗಳು ಪರದಾಡಿದ್ದರು.
ಬೌಲರ್‌ಗಳಿಗೆ ಮಾತ್ರ ಈ ಪಿಚ್ ಅನುಕೂಲಕರವಾಗಿತ್ತು. ಆದರೂ ಕೆಲವೊಮ್ಮೆ ಬೌಲರ್ ನಿರೀಕ್ಷೆಗೆ ತಕ್ಕಂತೆ ಬೌಲ್ ಮಾಡಲು ಆಗುತ್ತಿರಲ್ಲಿಲ್ಲ. ಇದನ್ನು ನೋಡಿದ ಹಲವು ದಿಗ್ಗಜ ಕ್ರಿಕೆಟಿಗರು ಈ ಪಿಚ್ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಮೊದಲ ಬ್ಯಾಟಿಂಗ್ ಮಾಡಿದ ಭಾರತ 119 ರನ್‌ಗಳಿಗೆ ಆಲೌಟ್ ಆಗಿತ್ತು. ಟೀಮ್ ಇಂಡಿಯಾ ಕಡಿಮೆ ರನ್ ಕೆಲ ಹಾಕಿರುವುದನ್ನು ನೋಡಿದ ಅಭಿಮಾನಿಗಳು ಪಾಕಿಸ್ತಾನ ಗೆಲ್ಲುತ್ತದೆ ಎಂದು ನಿರೀಕ್ಷಿಸಿದ್ದರು. ಈ ಗುರಿ ಚೇಸಿಂಗ್ ಮಾಡಿದ ಪಾಕಿಸ್ತಾನ ತಂಡವು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತ್ತು. ಸುಲಭ ಗುರಿ ಬೆನ್ನಟ್ಟಲು ಸಾಧ್ಯವಾಗದೆ ಪಾಕಿಸ್ತಾನ ಕೇವಲ 113 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತ 7 ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿತ್ತು.