ಟಿ20 ವಿಶ್ವಕಪ್ 2024: ಭಾರತ vs ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿ ಆಘಾತಕ್ಕೊಳಗಾದ ಲಲಿತ್ ಮೋದಿ!
ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಇದಕ್ಕಾಗಿ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಇದೇ ವೇಳೆ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಬಹು ನಿರೀಕ್ಷಿತ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳಲ್ಲದೆ, ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ.

ಗಡಿ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸುಮಾರು ಒಂದು ದಶಕದಿಂದ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಇದರ ಪರಿಣಾಮವಾಗಿ, ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಉಭಯ ತಂಡಗಳ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ.
ದೊಡ್ಡ ಆದಾಯ ಗಳಿಸುವ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ದರಗಳು ಸಹ ಇದನ್ನೇ ಸೂಚಿಸುತ್ತವೆ. ಐಸಿಸಿ ವೆಬ್‌ಸೈಟ್‌ನ ಪ್ರಕಾರ, ಹೈ-ವೋಲ್ಟೇಜ್ ಪಂದ್ಯ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿವೆ.
ಟಿ20 ವಿಶ್ವಕಪ್ ಪಂದ್ಯದ ನಿರೀಕ್ಷೆಯು ಸಾರ್ವಕಾಲಿಕ ಉತ್ತುಂಗದಲ್ಲಿರುವಾಗ, ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಪ್ರತಿ ಟಿಕೆಟ್‌ಗಳನ್ನು ಸುಮಾರು 20,000 ಯುಎಸ್ ಡಾಲರ್‌ಗೆ (16.6 ಲಕ್ಷ ರೂಪಾಯಿ) ಮಾರಾಟ ಮಾಡಲಾಗುತ್ತಿದೆ ಎಂದು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆರೋಪಿಸಿದ್ದಾರೆ.
ಇದೇ ವೇಳೆ ಕ್ರಿಕೆಟ್‌ನ ಉನ್ನತ ಪಂದ್ಯದ ಪ್ರಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿರುದ್ಧ ಲಲಿತ್ ಮೋದಿ ಕಿಡಿಕಾರಿದರು.
"ಐಸಿಸಿಯು ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಪ್ರತಿ ಸೀಟಿಗೆ 20000 ಯುಎಸ್ ಡಾಲರ್ ದರದಲ್ಲಿ ಡೈಮಂಡ್ ಕ್ಲಬ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ತಿಳಿದು ಆಘಾತಕ್ಕೊಳಗಾದೆ. ಯುಎಸ್ಎನಲ್ಲಿ ವಿಶ್ವಕಪ್ ಪಂದ್ಯಾವಳಿಯ ವಿಸ್ತರಣೆ ಮತ್ತು ಅಭಿಮಾನಿಗಳ ಒಳಗೊಳ್ಳುವಿಕೆ ಮಾಡಬೇಕು".
"ಇದರರ್ಥ ಪ್ರೇಕ್ಷಕರನ್ನು ಸೆಳೆಯುವುದು ಲಾಭ ಗಳಿಸುವ ಸಾಧನವಾಗಬಾರದು. ಟಿಕೆಟ್‌ನ ಕಡಿಮೆ ಬೆಲೆ ಕೇವಲ 2750 ಡಾಲರ್ ಇದೆ. ಆದರೆ ಒಂದು ಟಿಕೆಟ್‌ಗೆ 20000 ಯುಎಸ್ ಡಾಲರ್ ಮೊತ್ತದಲ್ಲಿ ಮಾರಾಟವಾಗುವುದು ಕೇಳಿ ಆಘಾತವಾಗಿದೆ," ಎಂದು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಪಂದ್ಯದ ಟಿಕೆಟ್‌ಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಮತ್ತು ಹಲವಾರು ವೆಬ್‌ಸೈಟ್‌ಗಳಲ್ಲಿ, ಅಭಿಮಾನಿಗಳು ಈ ಟಿಕೆಟ್‌ಗಳನ್ನು ನೈಜ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಖರೀದಿಸಬಹುದು ಎಂದು ಹೇಳುವ ಹಲವಾರು ವರದಿಗಳು ಬಂದಿವೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಐಸಿಸಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ. ನಂತರ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯುವ ಅತ್ಯಂತ ಉನ್ನತ ಮಟ್ಟದ ಗುಂಪು ಎ ಮುಖಾಮುಖಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications