ಗುರುವಾರ, ಜೂನ್ 6ರಂದು ಡಲ್ಲಾಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ವಿರುದ್ಧದ ಅವಮಾನಕರ ಸೋಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕಿಡಿಕಾರಿದ್ದಾರೆ.
ಗಮನಾರ್ಹವಾಗಿ, ಪಂದ್ಯಾವಳಿಯ 11ನೇ ಪಂದ್ಯದ ಸಂದರ್ಭದಲ್ಲಿ ಬಾಬರ್ ಅಜಂ ನಾಯಕತ್ವದ ತಂಡವು ಸಹ-ಆತಿಥೇಯರ ವಿರುದ್ಧ ಸೂಪರ್ ಓವರ್‌ನಲ್ಲಿ ಹೀನಾಯ ಸೋಲು ಕಂಡಿತು.

ತಮ್ಮ ನಿಗದಿತ 20 ಓವರ್‌ಗಳಲ್ಲಿ ತಲಾ 159 ರನ್ ಕಲೆಹಾಕಿದ ನಂತರ, ಉಭಯ ತಂಡಗಳು ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್‌ನಲ್ಲಿ ಸೆಣಸಾಡಿದವು. ಅಲ್ಲಿ ಯುಎಸ್ಎ ತಂಡ 5 ರನ್‌ಗಳಿಂದ ವಿಜಯಶಾಲಿಯಾಯಿತು. ಪಾಕಿಸ್ತಾನ ತಂಡದ ಸೋಲಿನ ನಂತರ, ಕಮ್ರಾನ್ ಅಕ್ಮಲ್ ಇದು ಪಾಕಿಸ್ತಾನ ಕ್ರಿಕೆಟ್‌ಗೆ ಅತಿದೊಡ್ಡ ಅವಮಾನ ಎಂದು ಕರೆದರು.
"ಪಾಕಿಸ್ತಾನ ಕ್ರಿಕೆಟ್‌ಗೆ ದೊಡ್ಡ ಅವಮಾನವೆಂದರೆ, ಸೂಪರ್ ಓವರ್‌ನಲ್ಲಿ ಪಂದ್ಯವನ್ನು ಸೋಲುವುದು. ಇದಕ್ಕಿಂತ ದೊಡ್ಡ ಅವಮಾನ ಇರಲಾರದು. ಯುಎಸ್ಎ ಅಸಾಧಾರಣವಾಗಿ ಆಡಿತು. ಅವರು ಕಡಿಮೆ ಶ್ರೇಣಿಯ ತಂಡವೆಂದು ಅನಿಸಲಿಲ್ಲ. ಯುಎಸ್ಎ ಪಾಕಿಸ್ತಾನ ತಂಡಕ್ಕಿಂತ ಮೇಲಿನ ಸ್ಥಾನದಲ್ಲಿದ್ದಾರೆ ಎಂದು ಅನಿಸಿತು. ಅದು ಅವರು ತೋರಿಸಿದ ಪ್ರಬುದ್ಧತೆಯ ಮಟ್ಟವಾಗಿದೆ," ಎಂದು ಕಮ್ರಾನ್ ಅಕ್ಮಲ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
"ಪಾಕಿಸ್ತಾನಕ್ಕಿಂತ ಉತ್ತಮವಾಗಿ ಕ್ರಿಕೆಟ್ ಆಡಿದ್ದರಿಂದ ಯುಎಸ್ಎ ತಂಡ ಗೆಲ್ಲಲು ಅರ್ಹರಾಗಿದ್ದಾರೆ. ನಮ್ಮ ಕ್ರಿಕೆಟ್‌ನ ಮುಖವು ಬಹಿರಂಗವಾಗಿದೆ. ನಾವು ನಮ್ಮ ಕ್ರಿಕೆಟ್ ಅನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ," ಎಂದು ಕಮ್ರಾನ್ ಅಕ್ಮಲ್ ತಿಳಿಸಿದರು.

ಯುಎಸ್ಎ ಮತ್ತು ಪಾಕಿಸ್ತಾನ ಪಂದ್ಯದ ಕುರಿತಾಗಿ, ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಂ ನಾಯಕತ್ವದ ತಂಡ ತಮ್ಮ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159 ರನ್ ಕಲೆಹಾಕಿತು.
4.4 ಓವರ್‌ಗಳ ನಂತರ 3 ವಿಕೆಟ್‌ಗೆ 26 ಎಂಬಂತೆ ತತ್ತರಿಸಿದ ನಂತರ, ನಾಯಕ ಬಾಬರ್ ಅಜಂ 43 ಎಸೆತಗಳಲ್ಲಿ 46 ರನ್ ಮತ್ತು ಶಾದಾಬ್ ಖಾನ್ 25 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಪ್ರತ್ಯುತ್ತರವಾಗಿ, ಯುಎಸ್ಎ ನಾಯಕ ಮೊನಾಂಕ್ ಪಟೇಲ್ 38 ಎಸೆತಗಳಲ್ಲಿ 50 ರನ್ ಅದ್ಭುತ ಅರ್ಧಶತಕದೊಂದಿಗೆ ತಮ್ಮ ತಂಡವನ್ನು ಚೇಸಿಂಗ್‌ನಲ್ಲಿ ಜೀವಂತವಾಗಿರಿಸಿದರು. ಅವರನ್ನು ಹೊರತುಪಡಿಸಿ, ಆಂಡ್ರೀಸ್ ಗೌಸ್ 26 ಎಸೆತಗಳಲ್ಲಿ 35 ರನ್ ಮತ್ತು ಆರೋನ್ ಜೋನ್ಸ್ 26 ಎಸೆತಗಳಲ್ಲಿ ಅಜೇಯ 36 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿ ತಂಡವನ್ನು ಟೈ ಮಾಡಲು ಸಹಾಯ ಮಾಡಿದರು.
ಸೂಪರ್ ಓವರ್‌ನಲ್ಲಿ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಮತ್ತು ಒಂದೆರಡು ವೈಡ್‌ಗಳು ಯುಎಸ್ಎ ತಂಡ 18 ರನ್ ಗಳಿಸಲು ನೆರವಾಯಿತು. ಪ್ರತ್ಯುತ್ತರವಾಗಿ ಯುಎಸ್ಎ ತಂಡದ ಸೌರಭ್ ನೇತ್ರಾವಳ್ಕರ್ ಯಶಸ್ವಿಯಾಗಿ ತಮ್ಮ ತಂಡದ ಸ್ಕೋರ್ ಅನ್ನು ರಕ್ಷಿಸಿದರು. ಇದರೊಂದಿಗೆ ಯುಎಸ್ಎ ಐತಿಹಾಸಿಕ ಗೆಲುವು ದಾಖಲಿಸಿತು.
ತಮ್ಮ ಟಿ20 ವಿಶ್ವಕಪ್ ಅಭಿಯಾನದ ಕಳಪೆ ಆರಂಭದ ನಂತರ, ಪಾಕಿಸ್ತಾನ ತಂಡವು ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಭಾರತ ತಂಡವನ್ನು ಎದುರಿಸಲಿದೆ.