ಮಂಗಳವಾರ, ಜೂನ್ 11ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕೆನಡಾ ವಿರುದ್ಧ ತನ್ನ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಮೂಲಕ ಪ್ರಸಕ್ತ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಯುಎಸ್ಎ ಮತ್ತು ಭಾರತ ತಂಡಗಳ ವಿರುದ್ಧ ಹೀನಾಯ ಸೋಲು ಕಂಡಿತು. ಈ ಗೆಲುವು ಪಾಕಿಸ್ತಾನ ತಂಡದ ಸೂಪರ್ 8ರ ಹಂತಕ್ಕೆ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡ ಆರೋನ್ ಜಾನ್ಸನ್ ಅವರ ಏಕೈಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು.
107 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ ಮೊಹಮ್ಮದ್ ರಿಜ್ವಾನ್ ಅವರ ಅಜೇಯ ಅರ್ಧಶತಕದ ಸಹಾಯದಿಂದ 17.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ನಂತರ ಜೊತೆಯಾದ ನಾಯಕ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ 2 ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ನಿರ್ಮಿಸಿದರು. ಬಾಬರ್ ಅಜಂ 33 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 33 ರನ್ ಗಳಿಸಿ ಔಟಾದರು.
ಇನ್ನು ಮೊಹಮ್ಮದ್ ರಿಜ್ವಾನ್ 53 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಅಜೇಯ 53 ರನ್ ಬಾರಿಸಿದರು. ಉಳಿದಂತೆ ಫಖರ್ ಜಮಾನ್ 4 ರನ್ ಮತ್ತು ಉಸ್ಮಾನ್ ಖಾನ್ 2 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಕೆನಡಾ ತಂಡದ ದಿಲ್ಲನ್ ಹೇಲಿಗರ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೆ, ಜೆರಮಿ ಗೋರ್ಡನ್ 3.3 ಓವರ್‌ಗಳಲ್ಲಿ 17 ರನ್ ನೀಡಿ 1 ವಿಕೆಟ್ ಕಬಳಿಸಿದರು.