ಜೂನ್ 10 ಸೋಮವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸಂತಸ ತಂದಿದ್ದರೆ, ಪಾಕಿಸ್ತಾನ ಅಭಿಮಾನಿಗಳು ಅಳುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ಭಾರತ ಗೆದ್ದು ಬೀಗಿದೆ. ಕಡಿಮೆ ಸ್ಕೋರ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲ್ಲುವ ನಿರೀಕ್ಷೆಯಲ್ಲಿತ್ತು.

ಆದರೆ ಟೀಮ್ ಇಂಡಿಯಾದ ಅದ್ಬುತ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನ 6 ರನ್‌ಗಳಿಂದ ಪಂದ್ಯವನ್ನು ಸೋಲಬೇಕಾಯಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರು ಪಾಕಿಸ್ತಾನಕ್ಕೆ 7ನೇ ಸೋಲಾಗಿದೆ.
ಪಾಕಿಸ್ತಾನದ ಈ ಸೋಲಿನ ನಂತರ, ಕೊನೆ ಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದ ನಸೀಮ್ ಶಾ ಅವರಿಗೆ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸೋಲಿನ ನಂತರ ನಸೀಮ್ ಮೈದಾನದಿಂದ ಹೊರಡುವಾಗ ಅಳಲು ತೋಡಿಕೊಂಡರು. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಸೀಮ್ ಶಾ ಅವರನ್ನು ಶಾಹೀನ್ ಆಫ್ರಿದಿ ಸಮಾಧಾನ ಪಡಿಸುತ್ತಿದ್ದಾರೆ. ಆದರೆ ಕಡಿಮೆ ಸ್ಕೋರ್ ಗಳಿಸಲು ಸಾಧ್ಯವಾಗದಕ್ಕೆ ನಸೀಮ್ ಶಾ ಮೈದಾನದಲ್ಲೇ ನೋವಿನಿಂದ ಕಣ್ಣೀರಿಟ್ಟಿದ್ದಾರೆ.
ಮತ್ತೊಂದೆಡೆ ನಸೀಮ್ ಶಾ ಅಳುತ್ತಿರುವಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸಹಾ ಸಮಾಧಾನಪಡಿಸಿದ್ದಾರೆ. ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಾಕಷ್ಟು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಕೂಡ ಬಂದಿವೆ.
ನಸೀಮ್ ಶಾ 4 ಎಸೆತಗಳಲ್ಲಿ 10 ರನ್ ಗಳಿಸಿದರು. ಕೊನೆಯ ಎರಡು ಎಸೆತಗಳಲ್ಲಿ ತಂಡದ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಆಗ ಪಾಕಿಸ್ತಾನ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯ ಬಳಿಕ ಮಾತನಾಡಿರುವ ಪಾಕಿಸ್ತಾನ ನಾಯಕ ಬಾಬರ್ ಅಜಮ್ ತಮ್ಮ ತಂಡದ ಬ್ಯಾಟರ್‌ಗಳ ಮೇಲೆ ಸೋಲಿನ ಹೊಣೆಯನ್ನು ಹೊರಿಸಿದ್ದಾರೆ. ನಾವು ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ.
ಆದರೆ ಬ್ಯಾಟಿಂಗ್ ನಲ್ಲಿ ಸತತ ಎರಡು ವಿಕೆಟ್ ಕಳೆದುಕೊಂಡು ಹಲವು ಡಾಟ್ ಬಾಲ್ ಗಳನ್ನು ಆಡಿದ್ದೆವು. ನಮ್ಮ ತಂತ್ರ ಸಾಮಾನ್ಯವಾಗಿ ಆಡುವುದಾಗಿತ್ತು. ಆದರೆ ನಾವು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಯುಎಸ್‌ಎ ಮತ್ತು ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನವು ಈಗ ಸೂಪರ್ 8 ಗೆ ಅರ್ಹತೆ ಪಡೆಯಲು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ. ಜೊತೆಗೆ ಉಳಿದಿರುವ ಎರಡು ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಿದೆ.