ಜೂನ್ 24 ಸೋಮವಾರ, ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ನ ಸೂಪರ್-8ರ ಪಂದ್ಯದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಿತು.
ಉಭಯ ತಂಡಗಳ ನಡುವಿನ ಈ ಪಂದ್ಯ ಒಂದು ರೀತಿಯಲ್ಲಿ ಕ್ವಾರ್ಟರ್ ಫೈನಲ್ ಆಗಿತ್ತು. ಯಾವ ತಂಡ ಗೆದ್ದರೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು.

ಸದ್ಯ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ವೆಸ್ಟ್ ಇಂಡೀಸ್ ತಂಡವನ್ನು ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ವಿಶ್ವಕಪ್ ನಿಂದ ಹೊರಬಿದ್ದಿದೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ಮಾರ್ಕೊ ಜಾನ್ಸನ್ ಸಿಕ್ಸರ್ ಹೊಡೆಯುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದು ಕೊಟ್ಟರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ ಅರ್ಧಶತಕ ಬಾರಿಸಿದರು. ರೋಸ್ಟನ್ ಅವರು 42 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ 52 ರನ್ ಗಳಿಸಿದರು.
ಇದಾದ ಬಳಿಕ ಸ್ಪೋಟಕ ಬ್ಯಾಟರ್ ಕೈಲ್ ಮೈಯರ್ಸ್ 34 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಮೂಲಕ 35 ರನ್ ಗಳಿಸಿದರು. ಇವರಿಬ್ಬರು ಬ್ಯಾಟರ್‌ಗಳನ್ನು ಹೊರತುಪಡಿಸಿದರೆ ಯಾರೊಬ್ಬ ಕೂಡ ವಿಂಡಿಸ್‌ಗೆ ಗಮನಾರ್ಹ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.
ನಾಯಕ ರೊಮೈನ್ ಪೊವೆಲ್ ಮತ್ತು ನಿಕೋಲಸ್ ಪೂರನ್ 1 ರನ್ ಗಳಿಸಿ ಔಟಾದರೆ, ಶಾಯ್ ಹೋಪ್ ಮತ್ತು ಶೆರ್ಫೇನ್ ರುದರ್ ಫೋರ್ಡ್ 0 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆಂಡ್ರೆ ರಸೆಲ್ 15 ರನ್ ಗಳಿಸಿ ಔಟಾದರು.
ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ ಅತಿ ಹೆಚ್ಚು ವಿಕೆಟ್ ಪಡೆದರು. ಶಮ್ಸಿ 4 ಓವರ್ ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರು. ಮಾರ್ಕೊ ಜಾನ್ಸೆನ್, ಏಡನ್ ಮಾರ್ಕ್ರಾಮ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರು. ಶಮ್ಸಿ ಅವರು ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ವೆಸ್ಟ್ ಇಂಡೀಸ್ ನೀಡಿದ್ದ 135 ರನ್ ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 12 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ರೀಜಾ ಹೆನ್ರಿಕ್ ಶೂನ್ಯಕ್ಕೆ ಔಟಾದರು. ಆ ಬಳಿಕ ಆಫ್ರಿಕಾ 2 ಓವರ್‌ಗಳಲ್ಲಿ 15 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಬೇಕಾಯಿತು.
ಮಳೆ ನಿಂತ ಬಳಿಕ ಪಂದ್ಯ ಆರಂಭವಾದಾಗ ಮೂರು ಓವರ್‌ಗಳ ಅಂತರದಲ್ಲಿ ರನ್‌ಗಳನ್ನು ಕಡಿತಗೊಳಿಸಲಾಯಿತು. ಆಫ್ರಿಕಾ ಮತ್ತೆ ಬ್ಯಾಟಿಂಗ್‌ಗೆ ಇಳಿದಾಗ 90 ಎಸೆತಗಳಲ್ಲಿ 108 ರನ್‌ಗಳ ಅಗತ್ಯವಿತ್ತು.
ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 6 ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ಸತತ ವಿಕೆಟ್‌ಗಳ ಪತನದಿಂದಾಗಿ, ವೆಸ್ಟ್ ಇಂಡೀಸ್ ಒಂದು ಸಮಯದಲ್ಲಿ ಹರಿಣಗಳ ಪಡೆ ಮೇಲೆ ಪ್ರಬಲ ಸಾಧಿಸಿತ್ತು. 7 ವಿಕೆಟ್‌ಗಳನ್ನು ಕಳೆದುಕೊಂಡಿದ ದಕ್ಷಿಣ ಆಫ್ರಿಕಾ ಗೆಲುವಿಗೆ 1 ಓವರ್‌ನಲ್ಲಿ 5 ರನ್‌ಗಳ ಅಗತ್ಯವಿತ್ತು, ಜಾನ್ಸೆನ್ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು.
ದಕ್ಷಿಣ ಆಫ್ರಿಕಾ ಪರ ಟ್ರಿಸ್ಟಾನ್ ಸ್ಟಬ್ಸ್ 27 ಎಸೆತಗಳಲ್ಲಿ 29 ರನ್ ಗಳಿಸಿ ಅತ್ಯಧಿಕ ಸ್ಕೋರ್ ಮಾಡಿದರು. ಇದಲ್ಲದೇ ಹೆನ್ರಿಚ್ ಕ್ಲಾಸೆನ್ 10 ಎಸೆತಗಳಲ್ಲಿ 22 ರನ್ ಮತ್ತು ಏಡೆನ್ ಮಾರ್ಕ್ರಾಮ್ 15 ಎಸೆತಗಳಲ್ಲಿ 18 ರನ್, ಡೇವಿಡ್ ಮಿಲ್ಲರ್ 4 ಮತ್ತು ಮಾರ್ಕೊ ಜಾನ್ಸೆನ್ ಔಟಾಗದೆ 21 ರನ್ ಗಳಿಸಿದರು.
ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 3 ವಿಕೆಟ್ ಕಬಳಿಸಿ ಮಿಂಚಿದರು. ಆಂಡ್ರೆ ರಸೆಲ್ ಮತ್ತು ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಪಡೆದರು.