ಭಾನುವಾರ, ಜೂನ್ 2ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿಯಾ ವಿರುದ್ಧ ಆತಿಥೇಯ ವೆಸ್ಟ್ ಇಂಡೀಸ್ ತಂಡ 5 ವಿಕೆಟ್‌ಗಳ ಅಂತರದ ಗೆಲುವಿನ ಮೂಲಕ ಅಭಿಯಾನ ಆರಂಭಿಸಿತು.
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳ ನಡುವಿನ ರೋಚಕ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತಂಡ ಗೆದ್ದಂತೆ, ಎರಡನೇ ಪಂದ್ಯದಲ್ಲಿ ಸಹ-ಆತಿಥೇಯ ತಂಡ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂ ಗಿನಿಯಾ ತಂಡ ಸೆಸೆ ಬೌ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿತು.
137 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಗುರಿ ಮುಟ್ಟಲು ಪ್ರಯಾಸಪಟ್ಟಿತು ಮತ್ತು 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಪಪುವಾ ನ್ಯೂ ಗಿನಿಯಾ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲು ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟರ್‌ಗಳು ತಡಕಾಡಿದರು. ಪಂದ್ಯಾವಳಿಯ ಶಾಕಿಂಗ್ ಸೋಲಿನಿಂದ ತಪ್ಪಿಸಿಕೊಳ್ಳಲು ಕೆರಿಬಿಯನ್ ತಂಡ ಕೊನೆಗೂ ಯಶಸ್ವಿಯಾಯಿತು.

ವೆಸ್ಟ್ ಇಂಡೀಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಬ್ರಾಂಡನ್ ಕಿಂಗ್ ಮತ್ತು ಜಾನ್ಸನ್ ಚಾರ್ಲ್ಸ್ ಉತ್ತಮ ಆರಂಭ ನೀಡಲಿಲ್ಲ. ಏಕೆಂದರೆ ತಂಡದ ಮೊತ್ತ 8 ರನ್‌ಗಳಾಗಿದ್ದಾಗ ಜಾನ್ಸನ್ ಚಾರ್ಲ್ಸ್ ಡಕ್‌ಗೆ ಔಟಾದರು.
ನಂತರ ಬಂದ ನಿಕೋಲಸ್ ಪೂರನ್ 27 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಬ್ರಾಂಡನ್ ಕಿಂಗ್ 29 ಎಸೆತಗಳಲ್ಲಿ 7 ಬೌಂಡರಿ ಮೂಲಕ 34 ರನ್ ಗಳಿಸಿ ಔಟಾದರು.
ರೋಸ್ಟನ್ ಚೇಸ್ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 42 ರನ್ ಗಳಿಸಿದರೆ, ರೋವ್ಮನ್ ಪೊವೆಲ್ 15 ರನ್ ಗಳಿಸಿದರು. ಉಳಿದಂತೆ ಕೊನೆಯಲ್ಲಿ ಆಂಡ್ರೆ ರಸೆಲ್ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲ್ಲಿಸಲು ಸಹಾಯ ಮಾಡಿದರು.
ಬೌಲಿಂಗ್‌ನಲ್ಲಿ ಪಪುವಾ ನ್ಯೂ ಗಿನಿಯಾ ಪರ ಅಸ್ಸಾದ್ ವಾಲಾ 2 ವಿಕೆಟ್ ಕಬಳಿಸಿದರೆ, ಅಲೀ ನಾವೊ, ಚಾಡ್ ಸೋಪರ್ ಮತ್ತು ಜಾನ್ ಕರಿಕೊ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಪಪುವಾ ನ್ಯೂ ಗಿನಿಯಾ ತಂಡದ ಪರ ನಾಯಕ ಅಸ್ಸಾದ್ ವಾಲಾ 21 ರನ್ ಗಳಿಸಿದರೆ, ಸೆಸೆ ಬೌ 50 ರನ್ ಗಳಿಸಿ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಚಾರ್ಲ್ಸ್ ಅಮಿನಿ 12 ರನ್, ಕಿಪ್ಲಿನ್ ಡೊರಿಗಾ 27 ರನ್, ಚಾಡ್ ಸೋಪರ್ 10 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಪರ ಅಲ್ಝಾರಿ ಜೋಸೆಫ್ 2 ವಿಕೆಟ್ ಪಡೆದರೆ, ಆಂಡ್ರೆ ರಸೆಲ್ 2 ವಿಕೆಟ್ ಕಬಳಿಸಿದರು. ಉಳಿದಂತೆ ಅಕೈಲ್ ಹೊಸೈನ್, ರೊಮಾರಿಯೊ ಶೆಫರ್ಡ್ ಮತ್ತು ಗುಡಾಕೇಶ್ ಮೋಟಿ ತಲಾ ಒಂದೊಂದು ವಿಕೆಟ್ ಪಡೆದರು.