T20 World Cup 2024: ಮೈದಾನದಲ್ಲಿ ಗಮನ ಸೆಳೆದ ಗುಲ್ಬದಿನ್ ನೈಬ್ ಅದ್ಭುತ ಆಕ್ಟಿಂಗ್; ರಶೀದ್ ಖಾನ್ ಹೇಳಿದ್ದೇನು?
ಜೂನ್ 25 ಮಂಗಳವಾರ, ಐಸಿಸಿ 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ಪ್ರವೇಶಿಸಿದೆ. ಐಸಿಸಿ ಟೂರ್ನಿಯೊಂದರಲ್ಲಿ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಇದರೊಂದಿಗೆ ರಶೀದ್ ಖಾನ್ ಪಡೆ ದಾಖಲೆ ನಿರ್ಮಿಸಿದೆ.
ಸೆಮಿಫೈನಲ್ ತಲುಪಿರುವ ಅಫ್ಘಾನಿಸ್ತಾನದ ಪಯಣ ಸುಲಭವಾಗಿರಲಿಲ್ಲ. ಬಲಿಷ್ಠ ತಂಡಗಳ ಎದುರು ದಿಟ್ಟ ಹೋರಾಟ ನಡೆಸಿ ಪಂದ್ಯಗಳನ್ನು ಗೆದ್ದು ಈ ಹಂತಕ್ಕೆ ಬಂದಿದೆ. ಆದರೆ ಟಿ20 ವಿಶ್ವಕಪ್ ಸೂಪರ್-8ರ ಬಾಂಗ್ಲಾದೇಶ ವಿರುದ್ಧದ ಮಾಡು ಇಲ್ಲವೇ ಮಡಿ ಕೊನೆ ಪಂದ್ಯದಲ್ಲಿ ಅಫ್ಘಾನಿಸ್ತಾನ ಭರ್ಜರಿ ಗೆಲುವು ಸಾಧಿಸಿತು. ಹೀಗಾಗಿ ಅಫ್ಘನ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್ ನಷ್ಟಕ್ಕೆ 115 ರನ್‌ಗಳನ್ನು ಕಲೆ ಹಾಕಿತ್ತು. ಅಫ್ಘಾನಿಸ್ತಾನದ 116 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ನೀಡಿತ್ತು.
ಒಂದು ತುದಿಯಿಂದ ಸತತ ವಿಕೆಟ್ ಉರುಳಿದ ಕಾರಣ ಅಫ್ಘಾನಿಸ್ತಾನ ನಿರಾಳವಾಯಿತು. ಆದರೆ ಇನ್ನೊಂದು ತುದಿಯಲ್ಲಿ ಲಿಟನ್ ದಾಸ್ ಆಫ್ಘನ್ ತಂಡಕ್ಕೆ ಸಮಸ್ಯೆ ಹೆಚ್ಚಿಸಿದ್ದರು. ಪಂದ್ಯದ ಮೇಲೆ ಮಳೆಯ ನೆರಳು ಕೂಡ ಇತ್ತು.
ಹೀಗಾಗಿ ಡಿಎಲ್‌ಎಸ್ ಪ್ರಕಾರ, ಬಾಂಗ್ಲಾದೇಶವು ಅಫ್ಘಾನಿಸ್ತಾನಕ್ಕಿಂತ ಕೇವಲ 2 ರನ್‌ಗಳಷ್ಟು ಹಿಂದಿತ್ತು. ಈ ವೇಳೆ ಮೈದಾನದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ಅಫ್ಘಾನಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್ ಅವರು ಪಂದ್ಯವನ್ನು ವಿಳಂಬಗೊಳಿಸಲು ಆಟಗಾರರಿಗೆ ಕೈ ಬೀಸಿ ಸೂಚಿಸಿದರು.
ಇದನ್ನು ನೋಡಿದ ಗುಲ್ಬದಿನ್ ನೈಬ್ ಸ್ಲಿಪ್‌ನಲ್ಲಿ ನಿಂತಿರುವಾಗ ಗಾಯಗೊಂಡಂತೆ ಕೆಳಗೆ ಬಿದ್ದರು. ಬಳಿಕ ಸಹಾ ಆಟಗಾರರು ಡ್ರೆಸಿಂಗ್ ರೂಮ್ ಕಡೆಗೆ ಕರೆದುಕೊಂಡು ಹೋದರು. ಇದಾದ ಸ್ವಲ್ಪ ಸಮಯದ ನಂತರ 15ನೇ ಓವರ್‌ನಲ್ಲಿ ಗುಲ್ಬದಿನ್ ಮೈದಾನಕ್ಕೆ ಮರಳಿ ಬಂದರು.
ಫೀಲ್ಡ್ ಮಾಡುವಾಗ ಕೋಚ್ ಸಿಗ್ನಲ್ ಕೊಟ್ಟ ಬಳಿಕವೇ ಗುಲ್ಬದಿನ್ ಬಿದ್ದಿರುವುದರಿಂದ ಹಲವರು ಇದನ್ನು ವ್ಯಂಗ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಲ್ಬದಿನ್ ಅವರಿಗೆ ಆಸ್ಕರ್ ಅಥವಾ ಎಮ್ಮಿ ಪ್ರಶಸ್ತಿ ಕೊಡಿ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಮತ್ತೊಂದೆಡೆ ಗಾಯಗೊಂಡಿದ್ದ ಗುಲ್ಬದಿನ್ ನೈಬ್ ಪಂದ್ಯ ಗೆದ್ದ ಬಳಿಕ ಓಡೋಡಿ ಬಂದು ಸಂಭ್ರಮಾಚರಣೆ ಮಾಡಿದ್ದಾರೆ. ಗಾಯಗೊಂಡು ವಿಶ್ರಾಂತಿಯಲ್ಲದ್ದವರು ಇಷ್ಟು ವೇಗವಾಗಿ ಓಡಿ ಬರಲು ಹೇಗೆ ಸಾಧ್ಯ. ಇದೊಂದು ನಾಟಕ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ರಶೀದ್ ಖಾನ್ ಹೇಳಿದ್ದೇನು?
ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡವು ಐತಿಹಾಸಿಕ ವಿಜಯ ಸಾಧಸಿದ ನಂತರ ನಾಯಕ ರಶೀದ್ ಖಾನ್ ತಮ್ಮ ಆಟಗಾರರನ್ನು ಅಪಾರವಾಗಿ ಹೊಗಳಿದರು. ಇದೇ ವೇಳೆ ಅವರು ಗುಲ್ಬದಿನ್ ನೈಬ್ ಅವರ ಗಾಯದ ಬಗ್ಗೆ ಮೌನ ಮುರಿದ್ದಾರೆ.
'ಗುಲ್ಬದಿನ್‌ಗೆ ಸ್ವಲ್ಪ ಸೆಳೆತವಿದೆ ಎಂದು ನಾನು ಭಾವಿಸಿದ್ದೇನೆ. ಅವರು ಅದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ರಶೀದ್ ಖಾನ್ ಹೇಳಿದ್ದಾರೆ.
ಇದಲ್ಲದೇ ಪಂದ್ಯದ ಗೆಲುವಿನ ನಂತರ ರಶೀದ್ ಖುಷಿಯಿಂದ ಕಾಣುತ್ತಿದ್ದರು. ಮುಂದುವರಿದು ಮಾತನಾಡಿದ ಅವರು, 'ಸೆಮಿಫೈನಲ್ ತಲುಪುವುದು ನಮಗೆ ಕನಸಿನಂತೆ. ನಾವು ಪಂದ್ಯಾವಳಿಯನ್ನು ಹೇಗೆ ಪ್ರಾರಂಭಿಸಿದ್ದೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.
ನಾವು ನ್ಯೂಜಿಲೆಂಡ್ ಅನ್ನು ಸೋಲಿಸಿದಾಗ ಈ ಆತ್ಮವಿಶ್ವಾಸ ಬಂದಿತು. ಇದು ನಂಬಲಸಾಧ್ಯ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications