ಪ್ರಮುಖ ಆಟಗಾರರೇ ಅಲಭ್ಯ! :ಗಾಯದ ಕಾರಣದಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದ ವಿಶ್ವದ 4 ಸ್ಟಾರ್ ಆಟಗಾರರು

ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಈಗ ಬಾಕಿಯಿದ್ದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಎಲ್ಲಾ ತಂಡಗಳು ಕೂಡ ಈ ಪ್ರತಿಷ್ಠಿತ ಟೂರ್ನಿಗೆ ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಆದರೆ ಈ ಸಂದರ್ಭದಲ್ಲಿ ಕೆಲ ತಂಡಗಳು ಅಂತಿಮ ಹಂತದಲ್ಲಿ ಪ್ರಮುಖ ಆಟಗಾರರನ್ನು ಗಾಯದ ಕಾರಣದಿಂದಾಗಿ ಕಳೆದುಕೊಳ್ಳುತ್ತಿದ್ದು ತಂಡಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ವಿಶ್ವಕಪ್ ಟೂರ್ನಿ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಟಿ20 ಮಾದರಿಯಲ್ಲಿ ಸ್ಟಾರ್ ಆಟಗಾರರಾಗಿ ಮಿಂಚುತ್ತಿರುವ ಕೆಲ ಆಟಗಾರರು ಗಾಯಗೊಂಡಿದ್ದಾರೆ. ಈ ಮೂಲಕ ಮಹತ್ವದ ಟೂರ್ನಿಗೆ ಈ ಆಟಗಾರರ ಸೇವೆಯನ್ನು ಆಯಾ ತಂಡಗಳು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಕ್ರೀಡೆಯಲ್ಲಿ ಇದು ಸಾಮಾನ್ಯವೇ ಆದರೂ ಈ ಸವಾಲನ್ನು ತಂಡಗಳು ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಾಗಾದರೆ ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಗುಳಿಯುತ್ತಿರುವ ನಾಲ್ವರು ಸ್ಟಾರ್ ಆಟಗಾರರು ಯಾರು ಎಂಬುದನ್ನು ಮುಂದೆ ಓದಿ..

ಜಾನಿ ಬೈರ್‌ಸ್ಟೋವ್
ಗಾಯದ ಕಾರಣದಿಂದಾಗಿ ಈ ಬಾರಿಯ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದ ಪ್ರಮುಖ ಆಟಗಾರರಲ್ಲಿ ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟರ್ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಒಬ್ಬರು. ಅನಿರೀಕ್ಷಿತವಾಗಿ ಮಾಡಿಕೊಂಡ ಎಡವಟ್ಟಿನಿಂದಾಗಿ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದು ಸಂಪೂರ್ಣ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಪರಿಸ್ಥಿತಿ ಬಂದಿದೆ. ಗಾಲ್ಫ್ ಕೋರ್ಟ್‌ನಲ್ಲಿ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದರು. ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಿರುವ ಜಾನಿ ಬೈರ್‌ಸ್ಟೋವ್ ಈ ಬಾರಿಯ ವಿಶ್ವಕಪ್‌ನಲ್ಲಿ ಅಲಭ್ಯವಾಗುತ್ತಿರುವುದು ಖಮಡಿತವಾಗಿಯೂ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯಾಗಲಿದೆ.

ರಾಸ್ಸಿ ವಾಂಡರ್ ಡಸನ್
ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕ ಅತ್ಯಂತ ಬಲಿಷ್ಠವಾಗಿದೆ ಎನಿಸಲು ಕಾರಣವಾಗಿರುವ ಪ್ರಮುಖ ಆಟಗಾರ ರಾಸ್ಸಿ ವಾಂಡರ್ ಡಸನ್. ಆದರೆ ಗಾಯದ ಕಾರಣದಿಂದಾಗಿ ಈ ಬಲಗೈ ಆಟಗಾರ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ವೇಗದ ಬೌಲಿಂಗ್ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದ ಕಾರಣ ಆಸ್ಟ್ರೇಲಿಯಾ ನೆಲದಲ್ಲಿ ರಾಸ್ಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಮುಖ ಅಸ್ತ್ರವಾಗಿರುತ್ತಿದ್ದರು. ಆದರೆ ಹರಿಣಗಳ ಪಡೆ ಈಗ ಪರ್ಯಾಯ ಆಟಗಾರನನ್ನು ಕಂಡುಕೊಳ್ಳಬೇಕಿದೆ.

ರವೀಂದ್ರ ಜಡೇಜಾ
ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯದ ಕಾರಣದಿಂದಾಗಿ ಈ ಬಾರಿಯ ವಿಶ್ವಕಪ್‌ನಿಂದ ಹೊರಗುಳಿಯುತ್ತಿರುವ ಮತ್ತೋರ್ವ ಆಟಗಾರನಾಗಿದ್ದಾರೆ. ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದ ರವೀಂದ್ರ ಜಡೇಜಾ ಆರಂಭಿಕ ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಆದರೆ ಬಳಿಕ ಹಠಾತ್ ಆಗಿ ತೀವ್ರ ಗಾಯಕ್ಕೆ ತುತ್ತಾದ ರವೀಂದ್ರ ಜಡೇಜಾ ಉಳಿದ ಪಂದ್ಯಗಳಿಂದ ಹೊರಗುಳಿಯುವಂತಾಯಿತು. ರವೀಂದ್ರ ಜಡೇಜಾ ಈಗಾಗಲೇ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ. ಭಾರತ ತಂಡದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅದ್ಭುತ ಹೊಂದಾಣಿಕೆಗೆ ಜಡೇಜಾ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಭಾರತ ವಿಶ್ವಕಪ್‌ನಲ್ಲಿ ಜಡೇಜಾ ಅವರನ್ನು ಮಿಸ್ ಮಾಡಿಕೊಳ್ಳಲಿದೆ.

ಜಸ್ಪ್ರೀತ್ ಬೂಮ್ರಾ
ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಗಾಯದ ಕಾರಣದಿಂದಾಗಿ ವಿಶ್ವಕಪ್‌ಗೆ ಅಲಭ್ಯವಾಗುತ್ತಿರುವ ಮತ್ತೋರ್ವ ಆಟಗಾರನಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಇಬ್ಬರು ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಲಿದೆ. ಭಾರತ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಂಡು ಆಸಿಸ್ ನೆಲದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಿರೀಕ್ಷೆ ಹೊಂದಿದ್ದ ಬೂಮ್ರಾ ಮತ್ತೊಮ್ಮೆ ತೀವ್ರ ಬೆನ್ನುನೋವಿಗೆ ತುತ್ತಾಗಿದ್ದು ಆಘಾತ ಮೂಡಿಸಿದೆ. ಕಳೆದ ಏಷ್ಯಾ ಕಪ್‌ನಲ್ಲಿ ಬೂಮ್ರಾರ ಅಲಭ್ಯತೆಯಿಂದ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ಭಾರತದ ವೇಗದ ಬೌಲಿಂಗ್ ವಿಭಾಗ ವಿಶ್ವಕಪ್ ಟೂರ್ನಿಯಲ್ಲಿ ಯಾವ ರೀತಿಯಾಗಿ ಈ ಗೈರನ್ನು ಸರಿ ಮಾಡಿಕೊಳ್ಳಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications