ಚೆನ್ನೈ: ಆರಂಭಿಕ ಆಟಗಾರ ಇಬ್ರಾಹಿಂ ಜರ್ದಾನ್ ಅಬ್ಬರ ಬ್ಯಾಟಿಂಗ್ ಹಾಗೂ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರ ಬಿಗುವಿನ ದಾಳಿಯ ನೆರವಿನಿಂದ ಅಫ್ಘಾನಿಸ್ತಾನ ಟಿ20 ವಿಶ್ವಕಪ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 82 ರನ್‌ಗಳಿಂದ ಕೆನಡಾ ತಂಡವನ್ನು ಮಣಿಸಿತು. ಈ ಮೂಲಕ ಟೂರ್ನಿಗೆ ವಿದಾಯ ಹೇಳಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನದ ಆರಂಭ ಸಾಧಾರಣವಾಗಿತ್ತು. ರಹಮತುಲ್ಲಾ ಗುರ್ಬಾಜ್ (30) ಹಾಗೂ ಇಬ್ರಾಹಿಂ ಜರ್ದಾನ್ ಜೋಡಿ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 47 ರನ್ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗುಲ್ಬುದ್ದೀನ್ ನಯಿಬ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಮೂರನೇ ವಿಕೆಟ್‌ಗೆ ಸೆಡಿಕುಲ್ಲಾ ಅಟಲ್ ಹಾಗೂ ಇಬ್ರಾಹಿಂ ಜರ್ದಾನ್ ಜೋಡಿ ತಂಡಕ್ಕೆ ಆಸರೆಯಾಯಿತು. ಸುಮಾರು 10 ಓವರ್‌ಗಳ ಕಾಲ ವಿಕೆಟ್ ಬೀಳದಂತೆ ನೋಡಿಕೊಂಡ ಜೋಡಿ ಆರ್ಭಟಿಸಿತು. ಅಲ್ಲದೆ ಎದುರಾಳಿ ಬೌಲರ್‌ಗಳ ಹೆಡೆಮುರಿ ಕಟ್ಟಿ ಅಬ್ಬರಿಸಿತು. ಈ ಜೋಡಿ 60 ಎಸೆತಗಳಲ್ಲಿ 95 ರನ್‌ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಸೆಡಿಕುಲ್ಲಾ ಅಟಲ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಔಟ್ ಆದರು. ಅಜ್ಮತುಲ್ಲಾ ಓಮರ್‌ಜಾಯಿ 13 ರನ್‌ಗಳಿಗೆ ಆಟ ಮುಗಿಸಿದರು.
24 ವರ್ಷದ ಯುವ ಆಟಗಾರ ಇಬ್ರಾಹಿಂ ಜರ್ದಾನ್ ತಮ್ಮ ಚೊಚ್ಚಲ ಟಿ20 ಶತಕದಿಂದ ವಂಚಿತರಾದರು. ಇವರು ಆರಂಭದಿಂದಲೂ ಬ್ಯಾಟ್ ಬೀಸಿ 95 ರನ್ ಕಲೆ ಹಾಕಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 7 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ4 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು.
ಗುರಿಯನ್ನು ಬೆನ್ನಟ್ಟಿದ ಕೆನಡಾ ತಂಡದ ಆರಂಭಿಕರು 25 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಯುವರಾಜ್ ಸಾಮ್ರಾ (17), ದಿಲ್ಪ್ರೀತ್ ಬಾಜ್ವಾ (13), ನಿಕೋಲಸ್ ಕಿರ್ಟನ್ (10), ಶ್ರೇಯಸ್ ಮೊವ್ವ (2) ದೊಡ್ಡ ಇನಿಂಗ್ಸ್ ಸಹ ಕಟ್ಟಲಿಲ್ಲ. ಅಲ್ಲದೆ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ಸಹ ನೀಡಲಿಲ್ಲ. 48 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಹರ್ಷ್ ಠಾಕರ್ ಮತ್ತು ಸಾದ್ ಬಿನ್ ಜಾಫರ್ ಜೋಡಿ ಆಧಾರವಾಯಿತು. ಈ ಜೋಡಿ 37 ಎಸೆತಗಳಲ್ಲಿ 63 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಬಾರಿಸಿದ್ದ ಹರ್ಷ್ ಠಾಕರ್ ವಿಕೆಟ್ ಒಪ್ಪಿಸಿದರು. ಸಾದ್ ಬಿನ್ ಜಾಫರ್ 28 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಕೆನಡಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 118 ರನ್ ಸೇರಿಸಿತು.

ಅಫ್ಘಾನಿಸ್ತಾನದ ಅನುಭವಿ ಆಟಗಾರ ಮೊಹಮ್ಮದ್ ನಬಿ 4 ಓವರ್ ಬೌಲ್ ಮಾಡಿ 7 ರನ್ ನೀಡಿ 4 ವಿಕೆಟ್ ಕಬಳಿಸಿದರು. ರಾಶೀದ್ ಖಾನ್ 19 ರನ್ ನೀಡಿ 2 ವಿಕೆಟ್ ಉರುಳಿಸಿದರು.