ರೋಚಕ ಕದನ ಗೆದ್ದು ಫೈನಲ್‌ಗೇರಿದ ಆಸ್ಟ್ರೇಲಿಯಾ: ಪಾಕಿಸ್ತಾನದ ಹೋರಾಟ ಸೆಮಿಫೈನಲ್‌ಗೆ ಅಂತ್ಯ!

ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಜೇಯವಾಗಿದ್ದ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್‌ನಲ್ಲಿ ಸೋಲಿನ ರುಚಿ ತೋರಿಸಿದ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಲು ಒಂದೇ ಹೆಜ್ಜೆ ಬಾಕಿಯಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನದೊಂದಿಗೆ ಸತತ ಗೆಲುವು ಸಾಧಿಸುತ್ತಾ ಮುನ್ನುಗ್ಗಿದ್ದ ಪಾಕಿಸ್ತಾನ ಅದೇ ಆತ್ಮ ವಿಶ್ವಾಸದೊಂದಿಗೆ ಸೆಮಿಫೈನಲ್‌ಗೇರಿತ್ತು. ಆದರೆ ಪಾಕಿಸ್ತಾನದ ಗೆಲುವಿನ ಓಟಕ್ಕೆ ಆಸ್ಟ್ರೇಲಿಯಾ ತಡೆ ಹಾಕಿದೆ. ಸಾಕಷ್ಟು ರೋಚಕವಾಗಿ ನಡೆದ ಈ ಕದನದಲ್ಲಿ ಅಂತಿಮವಾಗಿ ಗೆಲುವಿನ ನಗು ಆಸ್ಟ್ರೇಲಿಯಾ ತಂಡದ ಪಾಲಾಗಿದೆ. ಮ್ಯಾಥ್ಯೂ ವೇಡ್, ಮಾರ್ಕಸ್ ಸ್ಟೋಯ್ನಿಸ್ ಹಾಗೂ ಡೇವಿಡ್ ವಾರ್ನರ್ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಆಡಂ ಜಂಪಾ ಪ್ರದರ್ಶನ ಕೂಡ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು ಮರೆಯುವಂತಿಲ್ಲ.

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನ
ಟಾಸ್ ಸೋತ ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿತ್ತು. ಈ ಪಂದ್ಯದಲ್ಲಿಯೂ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಪಾಕಿಸ್ತಾನ ತಂಡದ ಆರಂಭಿಕ ಆಟಗಾರರಾದ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಜೋಡಿ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನು ನೀಡಿದರು. ಜವಾಬ್ಧಾರಿಯುತ ಪ್ರದರ್ಶನ ನೀಡಿದ ಈ ಜೋಡಿಯನ್ನು ಆಡಂ ಜಂಪಾ ಬೇರ್ಪಡಿಸಿದರು. 34 ಎಸೆತಗಳಲ್ಲಿ 39 ರನ್‌ಗಳಿಸಿದ್ದ ಬಾಬರ್ ಅಜಂ ಜಂಪಾಗೆ ಔಟಾಗಿ ಫೆವಿಲಿಯನ್ ಸೇರಿಕೊಂಡರು.

ದೊಡ್ಡ ಮೊತ್ತದ ಗುರಿ ನೀಡಿದ ಪಾಕ್
ಅದಾದ ಬಳಿಕ ಜೊತೆಯಾದ ರಿಜ್ವಾನ್ ಹಾಗೂ ಫಾಕರ್ ಜಮಾನ್ ಜೋಡಿ ಮತ್ತೊಂದು ಉತ್ತಮ ಜೊತೆಯಾಟದಲ್ಲಿ ಭಾಗಿಯಾಯಿತು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಆಟಗಾರರು 72 ರನ್‌ಗಳ ಜೊತೆಯಾಟವನ್ನು ನೀಡಿದರು. ಈ ಸಂದರ್ಭದಲ್ಲಿ 52 ಎಸೆತಗಳಲ್ಲಿ 67 ರನ್ ಬಾರಿಸಿದ್ದ ರಿಜ್ವಾನ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ರಿಜ್ವಾನ್ ವಿಕೆಟ್ ಕಳೆದುಕೊಂಡ ನಂತರ ಆಸಿಫ್ ಅಲಿ ಹಾಗೂ ಶೋಯೆಬ್ ಮಲಿಕ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲವಾದರು. ಆದರೆ ಮತ್ತೊಂದು ತುದಿಯಲ್ಲಿ ಫಾಕರ್ ಜಮಾನ್ ಅಬ್ಬರ ಮುಂದುವರಿದಿತ್ತು. ಕೇವಲ 32 ಎಸೆತಗಳಲ್ಲಿ ಜಮಾನ್ 55 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್‌ಗಳಿಸಿತು. ಆಸ್ಟ್ರೇಲಿಯಾ ಪರವಾಗಿ ಸ್ಟಾರ್ಕ್ 2 ವಿಕೆಟ್ ಪಡೆದರೆ ಪ್ಯಾಟ್ ಕಮಿನ್ಸ್ ಹಾಗೂ ಆಡಂ ಜಂಪಾ ತಲಾ ಒಂದು ವಿಕೆಟ್ ಕಬಳಿಸಿದರು. ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದರು.

ಆಸಿಸ್‌ಗೆ ಆರಂಭಿಕ ಆಘಾತ, ವಾರ್ನರ್ ಆಸರೆ
ಪಾಕಿಸ್ತಾನ ತಂಡ ನೀಡಿದ 177 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ಆರಂಬಿಕ ಓವನಲ್ಲಿಯೇ ಆಘಾತ ನಿಡಿದರು. ಆಸಿಸ್ ನಾಯಕ ಆರೋನ್ ಫಿಂಚ್ ಗೋಲ್ಡನ್ ಡಕ್ ವಿಕೆಟ್ ನೀಡಿದರು. ನಂತರ ಮಿಷೆಲ್ ಮಾರ್ಶ್ ಹಾಗೂ ವಾರ್ನರ್ ಎಚ್ಚರಿಕೆಯ ಆಟವಾಡಿದರು. ಅರ್ಧ ಶತಕದ ಜೊತೆಯಾಟವಾಡಿದ ಈ ಜೋಡಿ ನಂತರ ಬೇರ್ಪಟ್ಟಿತು. ನಂತರ ಬಂದ ಸ್ಟೀವ್ ಸ್ಮಿತ್ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಡೇವಿಡ್ ವಾರ್ನರ್ ಕೂಡ ಅರ್ಧ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿಕೊಂಡರು. ಆಸ್ಟ್ರೇಲಿಯಾ ಈ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿತ್ತು. ಇದೇ ಹಂತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ವಿಕೆಟ್ ಕಳೆದುಕೊಂಡರು. ಆಸ್ಟ್ರೇಲಿಯಾ 96 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.

ಸ್ಟೋಯ್ನಿಸ್, ವೇಡ್ ಅಮೋಘ ಆಟ
ಈ ಹಂತದಲ್ಲಿ ಪಾಕಿಸ್ತಾನ ಬೌಲರ್‌ಗಳು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಆದರೆ ಆಸ್ಟ್ರೇಲಿಯಾ ತನ್ನ ಹೋರಾಟವನ್ನು ಕೈಬಿಟ್ಟಿರಲಿಲ್ಲ. ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಮ್ಯಾಥ್ಯೂ ವೇಡ್ ಪಾಕಿಸ್ತಾನ ಬೌಲರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಾ ಸಾಗಿದರು. ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಆಡಿದ ಈ ಜೋಡಿ ಅಂತಿಮ ಹಂತದಲ್ಲಿ ರನ್ ವೇಗವನ್ನು ಹೆಚ್ಚಿಸಿದರು. ಅದರಲ್ಲೂ 16ನೇ ಓವರ್‌ನ ಬಳಿಕ ಪಂದ್ಯ ಆಸ್ಟ್ರೇಲಿಯಾದತ್ತ ವಾಲುತ್ತಾ ಸಾಗಿತು.
ಹಸನ್ ಅಲಿ ಎಸೆದ 18ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಈ ಜೋಡಿ 15 ರನ್‌ಗಳನ್ನು ಕಸಿದುಕೊಂಡಿತ್ತು. ಈ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ಪಂದ್ಯದ ಮೇಲೆ ಪಾಕಿಸ್ತಾನದ ಹಿಡಿತವನ್ನು ಸಡಿಲಗೊಳಿಸಿದರು. ಅಂತಿಮ ಎರಡು ಓವರ್‌ನಲ್ಲಿ ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದ ಶಹೀನ್ ಶಾ ಓವರ್ ಬಾಕಿಯಿದ್ದ ಕಾರಣ ಪಂದ್ಯ ಅಂತಿಮ ಓವರ್ ತನಕ ಸಾಗಿ ರೋಚಕ ಫಲಿತಾಂಶವನ್ನು ಪಡೆಯಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಶಾಹೀನ್ ಅಫ್ರಿದಿ ಓವರ್‌ನಲ್ಲಿ ಮೂರು ಸಿಕ್ಸರ್, ಪಂದ್ಯ ಅಂತ್ಯ!:
ಆಸ್ಟ್ರೇಲಿಯಾ ತಂಡದ ಗೆಲುವಿಗೆ 2 ಓವರ್‌ಗಳಲ್ಲಿ 22 ರನ್‌ಗಳ ಅಗತ್ಯವಿತ್ತು. ಬೌಲಿಂಗ್ ದಾಳಿಗೆ ಇಳಿದಿದ್ದು ಶಾಹೀನ್ ಶಾ ಅಫ್ರಿದಿ. ಮೊದಲ ಎರಡು ಎಸೆತಗಳನ್ನು ಶಾಹೀನ್ ಶಾ ಅದ್ಭುತವಾಗಿ ಎಸೆದಿದ್ದರು. ಅದರಲ್ಲೂ ಎರಡನೇ ಎಸೆತದಲ್ಲಿ ವೇಡ್ ನೀಡಿದ ಕ್ಯಾಚ್ ಕೈ ಚೆಲ್ಲಿದ್ದರು ಹಸನ್ ಅಲಿ. ಇದರ ಸಂಪೂರ್ಣ ಲಾಭವನ್ನು ವೇಡ್ ಪಡೆದುಕೊಂಡರು. ಮೂಂದಿನ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದ್ದರು ಮ್ಯಾಥ್ಯೂ ವೇಡ್. ಅಲ್ಲಿಗೆ ಪಾಕಿಸ್ತಾನದ ಫೈನಲ್‌ಗೇರುವ ಕನಸು ನುಚ್ಚು ನೂರಾಯಿತು. ಆಸ್ಟ್ರೇಲಿಯಾ ಅಮೋಘ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಪಾಕಿಸ್ತಾನ ಪ್ಲೇಯಿಂಗ್ XI : ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ಬೆಂಚ್: ಮೊಹಮ್ಮದ್ ನವಾಜ್, ಹೈದರ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಸರ್ಫರಾಜ್ ಅಹ್ಮದ್
ಆಸ್ಟ್ರೇಲಿಯಾ ಪ್ಲೇಯಿಂಗ್ XI : ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications