ನೀವೇ ಇಂದ್ರ.. ನೀವೇ ಚಂದ್ರ: ಭಾರತೀಯ ಕ್ರಿಕೆಟಿಗರನ್ನು ಅಟ್ಟಕ್ಕೇರಿಸುತ್ತಿರುವ ಇಂಗ್ಲೆಂಡ್ ಆಟಗಾರರು: ಏನಿದರ ಮರ್ಮ?

ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದು ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದ್ದು ಮುಂದಿನ ಗುರುವಾರ ಈ ಮಹತ್ವದ ಪಂದ್ಯಗಳು ನಡೆದಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರು ಮಾಧ್ಯಮಗಳ ಮುಂದೆ ನೀಡುತ್ತಿರುವ ಹೇಳಿಕೆಗಳು ಅಚ್ಚರಿ ಹುಟ್ಟಿಸಿದೆ.
ಮಹತ್ವದ ಹಂತಗಳಲ್ಲಿ ಎದುರಾಳಿಗಳು ಮುಖಾಮುಖಿಯಾದಾಗ ಪರಸ್ಪರ ಕಾಲೆಳೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಆಸ್ಟ್ರೇಲಿಯಾ ಇಂಗ್ಲೆಂಡ್‌ನಂಥಾ ರಾಷ್ಟ್ರಗಳ ಆಟಗಾರರು ಮೈಂಡ್‌ಗೇಮ್‌ನಲ್ಲಿ ಯಾವಾಗಲೂ ನಿಸ್ಸೀಮರು ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರುವ ವಿಚಾರವೆ. ಆದರೆ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿರುವ ಇಂಗ್ಲೆಂಡ್ ತಂಡದ ಆಟಗಾರರು ಭಾರತೀಯ ಆಟಗಾರರನ್ನು ಅತಿಯಾಗಿ ಎನ್ನುವಂತೆ ಪ್ರಶಂಸಿಸುತ್ತಿದ್ದಾರೆ. ಇದು ಕೂಡ ಈಗ ಕುತೂಹಲ ಕೆರಳುವಂತೆ ಮಾಡಿದೆ.

ಟೀಮ್ ಇಂಡಿಯಾ ನಾಯಕನ ಬಗ್ಗೆ ಜೋಸ್ ಬಟ್ಲರ್ ಹೇಳಿದ್ದಿಷ್ಟು!
ಭಾರತ ತಂಡದ ವಿರುದ್ದದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಜೋಸ್ ಬಟ್ಲರ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ರೋಹಿತ್ ಶರ್ಮಾ ಅವ ನಾಯಕತ್ವವನ್ನು ಹೊಗಳಿರುವ ಇಂಗ್ಲೀಷ್ ನಾಯಕ ರಣತಂತ್ರದಲ್ಲಿ ರೋಹಿತ್ ಅತ್ಯುತ್ತಮ ಎಂದಿದ್ದು ಶಾಂತಚಿತ್ತ ಸ್ಥಿತಿಯ ಬಗ್ಗೆಯೂ ಎಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಭಾರತ ಅದ್ಭುತವಾದ ತಂಡವಾಗಿದ್ದು ರೋಹಿತ್ ಶರ್ಮಾ ಅದ್ಭುತ ನಾಯಕನೆನಿಸಿಕೊಂಡಿದ್ದಾರೆ. ತಂತಂತ್ರದಲ್ಲಿ ಅವರು ಅತ್ಯುತ್ತಮವಾಗಿದ್ದು ನಿರಾಯಾಸವಾಗಿ ಬ್ಯಾಟಿಂಗ್ ಮಾಡುತ್ತಾರೆ" ಎಂದಿದ್ದಾರೆ ಜೋಸ್ ಬಟ್ಲರ್.

ಭಾರತೀಯರನ್ನು ಹೊಗಳುವುದರಲ್ಲಿ ಬೆನ್ ಸ್ಟೋಕ್ಸ್ ಕೂಡ ಮುಂದೆ
ಇನ್ನು ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಕೂಡ ಟೀಮ್ ಇಂಡಿಯಾ ಆಟಗಾರರನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿಲ್ಲ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಜೊತೆಗೆ ಅನುಭವಿ ಆಟಗಾರ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ರೋಹಿತ್ ಶರ್ಮಾ ಬಗ್ಗೆ ಬೆನ್ ಸ್ಟೋಕ್ಸ್ "ರೋಹತ್ ವಿಶ್ವದರ್ಜೆಯ ಆಟಗಾರ. ಕಳೆದ ಕೆಲ ಪಂದ್ಯಗಳಲ್ಲಿ ಆತ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಆತ ಬಿಗ್ ಮ್ಯಾಚ್ ಪ್ಲೇಯರ್. ಈ ಮಾದರಿಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬ" ಎಂದಿದ್ದಾರೆ ಬೆನ್ ಸ್ಟೋಕ್ಸ. ಇನ್ನು ವಿರಾಟ್ ಕೊಹ್ಲಿಯನ್ನು ಯಾವತ್ತೂ ನಿಲರ್ಕ್ಷಯ ಮಾಡಬಾರದು ಎಂದಿರುವ ಸ್ಟೋಕ್ಸ್ ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಯೀನ್ ಅಲಿಯಿಂದಲೂ ಪ್ರಶಂಸೆಯ ಮಾತು
ಇನ್ನು ಇಂಗ್ಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್ ಮೊಯೀನ್ ಅಲಿ ಕೂಡ ಭಾರತೀಯ ಆಟಗಾರರನ್ನು ಹೊಗಳಿ ಮಾತನಾಡಿದ್ದಾರೆ. ಅದರಲ್ಲೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಅಲಿ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದು "ಆತನೋರ್ವ ಅದ್ಭುತ ಕ್ರಿಕೆಟಿಗ. ಆತ ವಿಶ್ವದ ಅತ್ಯುತ್ತಮ ಆಟಗಾರ ಎಂದುಬು ನನ್ನ ಅನಿಸಿಕೆ. ಆತ ಟಿ20 ಕ್ರಿಕೆಟ್ ಮಾದರಿಯನ್ನು ಮತ್ತೊಂದು ಹಂತ ಮೇಲಕ್ಕೇರಿಸಿದ್ದಾರೆ. ಆತ ಅದ್ಭುತವಾಗಿ ಆಡುತ್ತಿರುವಾಗ ಆತನಿಗೆ ಬೌಲಿಂಗ್ ಮಾಡುವುದೇ ಸಾಧ್ಯವಿಲ್ಲ ಅನಿಸುತ್ತದೆ. ಆತನಿಗೆ ಬೌಲಿಂಗ್ ನಡೆಸುವುದು ಬಹಳ ಕಠಿಣ ಹಾಗೂ ಆತನ ದೌರ್ಬಲ್ಯವೇ ತಿಳಿಯುವುದಿಲ್ಲ" ಎಂದಿದ್ದಾರೆ ಮೊಯೀನ್ ಅಲಿ.

ಕುತೂಹಲ ಕೆರಳಿಸಿದ ಇಂಗ್ಲೆಂಡ್ ಆಟಗಾರರ ಈ ಹೇಳಿಕೆ
ಇನ್ನು ಇಂಗ್ಲೆಂಡ್ ಆಟಗಾರರು ಈ ರೀತಿಯಾಗಿ ಭಾರತೀಯ ಆಟಗಾರರನ್ನು ಹಾಡಿ ಹೊಗಳುತ್ತಿರುವುದು ಕುತೂಹಲ ಮೂಡಿಸದೆ ಇರುವುದಿಲ್ಲ. ಇದು ಕೂಡ ಇಗ್ಲೆಂಡ್ ಆಟಗಾರರ ಮೈಂಡ್‌ಗೇಮ್‌ನ ಭಾಗವೇ ಎಂಬ ಅನುಮಾನಗಳು ಕೂಡ ಮೂಡದೆ ಇರದು. ಈಗಾಗಲೇ ಅನೇಕ ಸಂದರ್ಭಗಳಲ್ಲಿ ಭಾರತೀಯ ಆಟಗಾರರನ್ನು ಕೆಣಕಿ ಆಸ್ಟ್ರೇಲಿಯಾದಂತಾ ಬಲಿಷ್ಠ ತಂಡಗಳು ತಮ್ಮದೇ ನೆಲದಲ್ಲಿ ಊಹಿಸಲೂ ಸಾಧ್ಯವಾಗದಂತಾ ಮುಖಭಂಗವನ್ನು ಅನುಭವಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದೇ ಇದೆ. ಇಂಥಾ ಹಿನ್ನೆಲೆಯಿರುವ ಭಾರತೀಯ ಆಟಗಾರರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಮೇಲುಗೈ ಸಾಧಿಸುವ ಲೆಕ್ಕಾಚಾರವೂ ಇರಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಮೈದಾನದಲ್ಲಿ ಈ ಎರಡು ತಂಡಗಳ ನಡುವಿನ ಹಣಾಹಣಿ ಹೇಗಿರಲಿದೆ ಎಂಬುದು ಮಾತ್ರ ಈಗ ಎಲ್ಲರಿಗೂ ತೀವ್ರ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications