ಟಿ20 ವಿಶ್ವಕಪ್: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಬೂಮ್ರಾ, ಹರ್ಷಲ್ ಫಿಟ್

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡುವಂತಾ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಅನುಭವಿಸಿದ ಬೌಲಿಂಗ್ ವಿಭಾಗ ಬಲಿಷ್ಠವಾಗಲಿದೆ. ಟಿ20 ವಿಶ್ವಕಪ್‌ಗೆ ಭಾರತದ ಇಬ್ಬರು ವೇಗಿಗಳು ಕಮ್‌ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಅದು ಬೇರೆ ಯಾರೂ ಅಲ್ಲ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್.
ಗಾಯದ ಕಾರಣದಿಂದಾಗಿ ಭಾರತದ ಪ್ರಮುಖ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗಿಯಾಗಿರಲಿಲ್ಲ. ಇಬ್ಬರು ಕೂಡ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್‌ನಲ್ಲಿ ಭಾಗಿಯಾಗಿದ್ದರು. ಇದೀಗ ಮೂಲಗಳಿಂದ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಇಬ್ಬರು ಕೂಡ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂಬ ಸುದ್ದಿ ಬಂದಿದೆ.

ಏಷ್ಯಾಕಪ್‌ಗೆ ಕಾಡಿದ್ದ ಅನುಭವಿ ಆಟಗಾರರ ಕೊರತೆ
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಅನುಭವಿ ವೇಗಿಗಳ ಅಲಭ್ಯತೆಯಿಂದಾಗಿ ಹಿನ್ನಡೆ ಅನುಭವಿಸಿತು. ಇನ್ನು ಈ ಪ್ರಮುಖ ಟೂರ್ನಿಗೆ ಕೇವಲ ಮೂವರು ಸ್ಪೆಶಲಿಸ್ಟ್ ವೇಗಿಗಳೊಂದಿಗೆ ಭಾರತ ಕಣಕ್ಕಿಳಿದಿತ್ತು. ಅನುಭವಿ ಭುವನೇಶ್ವರ್ ಕುಮಾರ್ ಜೊತೆಗೆ ಯುವ ಬೌಲರ್‌ಗಳಾದ ಹರ್ಷ್‌ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಕಣಕ್ಕಿಳಿದಿದ್ದರೆ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಸಾಥ್ ನೀಡಿದ್ದರು. ಆದರೆ ಆವೇಶ್ ಖಾನ್ ವೈಫಲ್ಯ ಅನುಭವಿಸಿದ್ದರ ಜೊತೆಗೆ ಬಳಿಕ ಅನಾರೋಗ್ಯದಿಂದ ಹೊರಗುಳಿದುವ ಪರಿಸ್ಥಿತಿ ಬಂದಾಗ ತಂಡ ಅನಿವಾರ್ಯವಾಗಿ ಹೆಚ್ಚುವರಿ ಸ್ಪಿನ್ನರ್‌ಗಳೊಂದಿಗೆ ಆಡಬೇಕಾಯಿತು. ಈ ಹಿನ್ನೆಲೆಯಲ್ಲಿ ಹರ್ಷಲ್ ಪಟೇಲ್ ಹಾಗೂ ಜಸ್ಪ್ರೀತ್ ಬೂಮ್ರಾ ಕಮ್‌ಬ್ಯಾಕ್ ತಂಡಕ್ಕೆ ಬಲ ನೀಡಲಿದೆ.

ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾದ ಬೂಮ್ರಾ, ಹರ್ಷಲ್
ಟೀಮ್ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಇಬ್ಬರು ಕೂಡ ಗಾಯದ ಕಾಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಎನ್‌ಸಿಎನಲ್ಲಿ ರಿಹ್ಯಾಬ್‌ನ್ಲಲಿ ಭಾಗಿಯಾಗಿದ್ದ ಇವರಿಬ್ಬರು ನಂತರ ಸಂಪೂರ್ಣವಾಗಿ ಫಿಟ್‌ನೆಸ್ ಗಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಪೂರ್ಣಸಾಮರ್ಥ್ಯದೊಂದಿಗೆ ಎನ್‌ಸಿಎನಲ್ಲಿ ಈ ಇಬ್ಬರು ಕೂಡ ಬೌಲಿಂಗ್ ನಡೆಸಿದ್ದು ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆಯ್ಕೆಗೆ ಲಭ್ಯವಾಗಲಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಕಮ್‌ಬ್ಯಾಕ್ ಮಾಡಲಿದ್ದಾರಾ ಶಮಿ?
ಇನ್ನು ಇದೇ ಸಂದರ್ಭದಲ್ಲಿ ಭಾರತ ಟಿ20 ತಂಡಕ್ಕೆ ಅನುಭವಿ ಆಟಗಾರ ಮೊಹಮ್ಮದ್ ಶಮಿ ಕೂಡ ಕಮ್‌ಬ್ಯಾಕ್ ಮಾಡಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ. ಏಷ್ಯಾಕಪ್‌ನಲ್ಲಿ ಅನುಭವಿಸಿದ ಹಿನ್ನಡೆಯಿಂದಾಗಿ ಶಮಿಯನ್ನು ತಂಡಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬಂದಿದೆ. ವಿಶ್ವಕಪ್‌ಗೆ ತಂಡದ ಆಯ್ಕೆಗೂ ಮುನ್ನ ನಡೆಯುವ ಆಯ್ಕೆ ಸಮಿತಿಯ ಸಭೆಯಲ್ಲಿ ಮೊಹಮ್ಮದ್ ಶಮಿ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಈ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾರಣ ಸಮರ್ಥ ವೇಗದ ಬೌಲಿಂಗ್ ವಿಭಾಗ ತಂಡದಲ್ಲಿರುವುದು ಬಹಳ ಮುಖ್ಯವಾಗಲಿದೆ.

ಸೆಪ್ಟೆಂಬರ್ 15ರಂದು ಆಯ್ಕೆ ಸಮಿತಿ ಸಭೆ
ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು ಟೂರ್ನಿಗೆ ಶೀಘ್ರದಲ್ಲಿಯೇ ತಂಡವನ್ನು ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಬೌಲಿಂಗ್ ವಿಭಾಗದ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅಥೌಆ ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದ್ದು ಇಬ್ಬರಿಗೂ ಅವಕಾಶ ನೀಡಬೇಕಾ ಎಂಬುದು ಕೂಡ ನಿರ್ಧಾರವಾಗಲಿದೆ. ಇನ್ನು ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸೇರ್ಪಡೆ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ಕುತೂಹಲ ಮೂಡಿಸಿದೆ. ಏಷ್ಯಾ ಕಪ್‌ನಲ್ಲಿ ಭಾರತ ಹಿನ್ನಡೆ ಅನುಭವಿಸಿರುವ ಕಾರಣದಿಮದಾಗಿ ಆಯ್ಕೆ ಸಮಿತಿಯ ಮುಂದಿನ ನಿರ್ಧಾರಗಳು ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ ಎಂಬುದು ನಿಜ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications