ಭಾರತದ ಜೊತೆಗಿನ ಬಿಗ್ ಫೈಟ್‌ಗೆ ಷರತ್ತು ವಿಧಿಸಿದ ಪಾಕ್
ಭಾರತ ಹಾಗೂ ಶ್ರೀಲಂಕಾದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಆರಂಭವಾಗಿದೆ. ಈ ವೇಳೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟ ತಂಡಗಳು ಭರ್ಜರಿ ಆರಂಭವನ್ನು ಮಾಡಿವೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆಯುತ್ತದಾ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಬಗ್ಗೆ ಇನ್ನು ಮಾತುಕತೆಗಳು ನಡೆದಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಯೋಗವೊಂದು ಪಾಕಿಸ್ತಾನಕ್ಕೆ ಬಂದಿಳಿದಿದೆ. ಸೋಮವಾರ ಪಿಸಿಬಿ ಹಾಗೂ ಐಸಿಸಿ ಅಧಿಕಾರಿಗಳ ನಡುವೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಪಿಸಿಬಿ ಅಧಿಕಾರಿಗಳು, ಪಾಕಿಸ್ತಾನದ ಪ್ರಧಾನಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿಯ ಬಳಿಕವೇ ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಈ ಸಭೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯ (ಬಿಸಿಬಿ) ಮುಖ್ಯಸ್ಥ ಅಮಿನುಲ್ ಇಸ್ಲಾಂ ಸಹ ಭಾಗವಹಿಸಿದ್ದಾರೆ.

ಲಾಹೋರ್‌ದಲ್ಲಿ ನಡೆಯುತ್ತಿರುವ ಐಸಿಸಿ ಹಾಗೂ ಪಿಸಿಬಿ ಅಧಿಕಾರಿಗಳ ಸಭೆಯಲ್ಲಿ ಪಾಕಿಸ್ತಾನ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ತಿಳಿದು ಬಂದಿದೆ.
ಪಾಕ್ ಇಟ್ಟ ಬೇಡಿಕೆ ಏನು?
- ಬೇಡಿಕೆ 1: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕು ಎಂದು ಪಿಸಿಬಿ ಬೇಡಿಕೆ ಇಟ್ಟಿದೆ. ಈ ಬೇಡಿಕೆಗೆ ಐಸಿಸಿ ಹಸಿರು ನಿಶಾನೆ ತೋರಿಸಿದಲ್ಲಿ ಮಾತ್ರ ಫೆ.15 ರಂದು ಭಾರತದ ವಿರುದ್ಧ ಪಂದ್ಯವನ್ನು ಆಡುವುದಾಗಿ ತಿಳಿದು ಬಂದಿದೆ.
- ಬೇಡಿಕೆ 2: ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಈ ಸರಣಿಗಳನ್ನು ಪುನರಾರಂಭ ಮಾಡಬೇಕು ಎಂಬ ಬೇಡಿಕೆಯನ್ನು ಸಹ ಇಟ್ಟಿದೆ.
- ಬೇಡಿಕೆ 3: ಹ್ಯಾಡ್ ಶೇಕ್ ಪ್ರೊಟೊಕಾಲ್ ಜಾರಿ ಮಾಡಬೇಕು ಎಂದು ಪಾಕ್ ತನ್ನ ಬೇಡಿಕೆಯನ್ನು ಮುಂದಿಟ್ಟಿದೆ. ಇದರ ಅಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೈದಾನಕ್ಕೆ ಇಳಿದಾಗ ಹ್ಯಾಂಡ್ ಶೇಕ್ ಮಾಡುವುದು ಕಡ್ಡಾಯ ಮಾಡಬೇಕು ಎಂದು ಪಿಸಿಬಿ ತಿಳಿಸಿದೆ. (ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ.)
ಬಹಿಷ್ಕಾರ ಏಕೆ?
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಬಾಂಗ್ಲಾದೇಶ, ಭದ್ರತಾ ಕಾರಣಗಳನ್ನು ನೀಡಿ ಭಾರತಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಐಸಿಸಿಗೆ ತಿಳಿಸಿತ್ತು. ಅಲ್ಲದೆ ದುಬೈನಲ್ಲಿ ನಡೆದ ಸಭೆಯಲ್ಲಿ ಬಿಸಿಬಿ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬೇಡಿಕೆ ಇಟ್ಟಿತ್ತು. ಇಲ್ಲದಿದ್ದರೆ ತನ್ನ ಗುಂಪನ್ನು ಬದಲಿಸುವಂತೆ ಕೇಳಿಕೊಂಡಿತ್ತು. ಆದರೆ ಐಸಿಸಿ, ಬಿಸಿಬಿ ಮನವಿಯನ್ನು ತಿರಸ್ಕರಿಸಿತ್ತು. ಇದರಿಂದಾಗಿಯೇ ಬಾಂಗ್ಲಾದೇಶ ತಂಡವನ್ನು ಐಸಿಸಿ ಟಿ20 ವಿಶ್ವಕಪ್‌ನಿಂದ ಕೈ ಬಿಡಬೇಕಾಯಿತು. ಬಾಂಗ್ಲಾದೇಶವನ್ನು ಕೈ ಬಿಟ್ಟ ಬಳಿಕ ಸ್ಕಾಟ್ಲೆಂಡ್‌ಗೆ ಐಸಿಸಿ ಟಿ20 ವಿಶ್ವಕಪ್ ಆಡಲು ಅವಕಾಶವನ್ನು ಕಲ್ಪಿಸಿತು.
ಬಾಂಗ್ಲಾದೇಶ ತಂಡವನ್ನು ಐಸಿಸಿ, ಟಿ20 ವಿಶ್ವಕಪ್‌ನಿಂದ ಹೊರಗಿಟ್ಟ ನಡೆಯನ್ನು ಪಿಸಿಬಿ ಖಂಡಿಸಿತ್ತು. ಅಲ್ಲದೆ ಬಾಂಗ್ಲಾದೇಶಕ್ಕೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿತ್ತು.
ಇತ್ತೀಚಿಗೆ ಪಾಕಿಸ್ತಾನದ ಪ್ರಧಾನಿಯವರು ಕ್ಯಾಬಿನೇಟ್‌ನಲ್ಲಿ ನಮ್ಮ ತಂಡದ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಕಣಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದ್ದರು. ಇನ್ನು ಈ ನಿರ್ಧಾರದಿಂದ ತನ್ನ ಮೇಲೆ ಬೀಳಬಹುದಾದ ಆರ್ಥಿಕ ಸಂಕಷ್ಟವನ್ನು ಮನವರಿಕೆ ಮಾಡಿಕೊಂಡಿದ್ದ ಪಿಸಿಬಿ ಫೋರ್ಸ್ ಮೇಜರ್ ಮೊರೆ ಹೋಗಿತ್ತು. ಇದರ ಅನ್ವಯ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ತಮ್ಮ ನಿಲುವಲ್ಲ ಸರ್ಕಾರದ ನಿಲುವು ಎಂದು ಪಿಸಿಬಿ, ಐಸಿಸಿಗೆ ತಿಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications