ಜೂನ್ 9 ಶನಿವಾರ, ಐಸಿಸಿ ಟಿ20 ವಿಶ್ವಕಪ್ 2024ರ ಲೀಗ್ ಹಂತದ 19ನೇ ಪಂದ್ಯದಲ್ಲಿ ಇಂದು (ಭಾನುವಾರ) ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಹಣಾಹಣಿ ನಡೆಯಲಿದೆ.
ಈ ಪಂದ್ಯವು ನ್ಯೂಯಾರ್ಕ್‌ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಈ ಮೆಗಾಫೈಟ್‌ನಲ್ಲಿ ಭಾರತದ ಬಲ ಬ್ಯಾಟಿಂಗ್ ಆಗಿದ್ದರೆ, ಪಾಕಿಸ್ತಾನದ ಶಕ್ತಿ ಬೌಲಿಂಗ್ ಆಗಿರುತ್ತದೆ. ಇಂತಹ ಹೈವೋಲ್ಟೇಜ್ ಪಂದ್ಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ನೇತೃತ್ವದ ಉಭಯ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಈ ಪಂದ್ಯಕ್ಕೂ ಮೊದಲು ಉಭಯ ತಂಡಗಳ ಅಂಕಿ-ಅಂಶಗಳು, ಪಿಚ್ ವರದಿ ಮತ್ತು ಸಂಭಾವ್ಯ ತಂಡದ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಟೀಮ್ ಇಂಡಿಯಾ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದಿದ್ದರೆ, 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಪಾಕಿಸ್ತಾನ 12 ಟಿ20 ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 9 ಪಂದ್ಯಗಳಲ್ಲಿ ಸೋಲು ಕಂಡಿದೆ.
ಹೀಗಾಗಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕಳೆದ ಐದು ಪಂದ್ಯಗಳ ಬಗ್ಗೆ ಅಂಕಿ-ಅಂಶಗಳನ್ನು ನೋಡುವುದಾದರೆ, ಇಲ್ಲಿಯೂ ಟೀಮ್ ಇಂಡಿಯಾ ತನ್ನ ಪ್ರಾಬಲ್ಯ ಹೊಂದಿದೆ. ಭಾರತ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಗೆದ್ದಿದೆ.
ನ್ಯೂಯಾರ್ಕ್‌ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಡ್ರಾಪ್-ಇನ್ ಪಿಚ್ ಅಸಮವಾದ ಬೌನ್ಸ್ ಅನ್ನು ಹೊಂದಿದೆ. ಈ ಕಾರಣದಿಂದಾಗಿ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಈ ಪಿಚ್‌ನಲ್ಲಿ, ಕೆಲವೊಮ್ಮೆ ಚೆಂಡು ವೇಗವಾಗಿ ಮತ್ತು ನಿಧಾನವಾಗಿ ಬರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಬ್ಯಾಟರ್‌ಗಳು ದೊಡ್ಡ ಹೊಡೆತಗಳನ್ನು ಆಡುವುದು ಸುಲಭವಲ್ಲ. ಈ ಸ್ಪಂಜಿನ ಬೌನ್ಸ್‌ನಿಂದಾಗಿ ಬ್ಯಾಟರ್‌ಗಳು ಗಾಯಗೊಂಡಿದ್ದಾರೆ. ಇಲ್ಲಿ ವೇಗದ ಬೌಲರ್‌ಗಳಿಗೆ ಸಾಕಷ್ಟು ಅನುಕೂಲಕರವಾಗಿದೆ.
ಬೌಲರ್‌ಗಳು ತಮ್ಮ ವೇಗ ಮತ್ತು ಬೌನ್ಸ್‌ನಿಂದ ಹೆಚ್ಚು ವಿಕೆಟ್ ಪಡೆಯುವ ಅವಕಾಶವಿದೆ. ಮತ್ತೊಂದೆಡೆ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಯಾವುದೇ ಸಹಾಯವಿಲ್ಲ. ಚೆಂಡು ಪಿಚ್‌ನಲ್ಲಿ ತಿರುಗುವುದಿಲ್ಲ.
ಇಲ್ಲಿಯವರೆಗೆ ಈ ಪಿಚ್‌ನಲ್ಲಿ ನಡೆದಿರುವ 2 ಪಂದ್ಯಗಳು ಕಡಿಮೆ ಸ್ಕೋರಿಂಗ್ ಆಗಿವೆ. ಭಾರತದ ವಿರುದ್ಧ ಐರ್ಲೆಂಡ್ 96 ರನ್‌ಗಳಿಗೆ ಸೀಮಿತವಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಐರ್ಲೆಂಡ್ ಕೇವಲ 125 ರನ್ ಗಳಿಸಲು ಸಾಧ್ಯವಾಯಿತು.
ಈ ಮೈದಾನದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಅಲ್ಪ ಮೊತ್ತವನ್ನು ಮಾತ್ರ ಗಳಿಸಲು ಶಕ್ತವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಿಚ್‌ನಲ್ಲಿ ಬೃಹತ್ ರನ್ ಗಳಿಸುವುದು ತುಂಬಾ ಕಷ್ಟಕರವಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್ ಬ್ಯಾಟ್ಸ್‌ಮನ್), ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್, ನಸೀಮ್ ಶಾ, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ.