ಈ ಸೆಮಿಫೈನಲ್ ಪಂದ್ಯವೇ ನನ್ನ ಕೊನೆಯ ಪಂದ್ಯ: ಮ್ಯಾಚ್ ವಿನ್ನರ್ ಮ್ಯಾಥ್ಯೂ ವೇಡ್‌ಗೆ ಹೀಗನ್ನಿಸಿದ್ದೇಕೆ?!

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಸೆಮಿ ಫೈನಲ್ ಸೆಣೆಸಾಟ ಅತ್ಯಂತ ರೋಚಕವಾಗಿ ಅಂತ್ಯವಾಗಿದ್ದು ಆಸ್ಟ್ರೇಲಿಯಾ ಅಮೋಘ ಗೆಲುವನ್ನಾಚರಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಅದ್ಭುತ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಆಸ್ಟ್ರೇಲಿಯಾ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು. ಪಂದ್ಯದಲ್ಲಿ ಬಹುತೇಕ ನಿಯಂತ್ರಣ ಸಾಧಿಸಿದ್ದ ಪಾಕಿಸ್ತಾನ ಕೊನೆಯ ಐದು ಓವರ್‌ಗಳಲ್ಲಿ ಎದುರಾಳಿಗೆ ಪಂದ್ಯವನ್ನು ಒಪ್ಪಿಸಿ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಅಮೋಘ ಆಟ ಪ್ರದರ್ಶಿಸಿ ಮ್ಯಾಚ್ ಇನ್ನರ್ ಎನಿಸಿಕೊಂಡಿದ್ದು ಮ್ಯಾಥ್ಯೂ ವೇಡ್. ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ವೇಡ್ ಪಂದ್ಯವನ್ನು ಪಾಕಿಸ್ತಾನದ ಬಿಗಿಹಿಡಿತದಿಂದ ಆಸ್ಟ್ರೇಲಿಯಾ ತೆಕ್ಕೆಗೆ ಬರುವಂತೆ ಮಾಡಿದ್ದರು. ಕೇವಲ 17 ಎಸೆತ ಎದುರಿಸಿದ ಮ್ಯಾಥ್ಯೂ ವೇಡ್ 41 ರನ್ ಬಾರಿಸಿ ಆಸಿಸ್ ಗೆಲುವಿಗೆ ಕಾರಣವಾದರು.
ಆದರೆ ಈ ಪಂದ್ಯದ ಮುಕ್ತಾಯದ ಬಳಿಕ ಮ್ಯಾಥ್ಯೂ ವೇಡ್ ತಮ್ಮಲ್ಲಿದ್ದ ಗೊಂದಲದ ಮನಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸೆಮಿಫಯನಲ್ ಪಂದ್ಯ ಆಸ್ಟ್ರೇಲಿಯಾ ತಂಡವನ್ನು ತಾನು ಪ್ರತಿನಿಧಿಸುವ ಕೊನೆಯ ಪಂದ್ಯವಾಗಬಹುದು ಎನಿಸಿತ್ತು ಎಂದಿದ್ದಾರೆ ಮ್ಯಾಥ್ಯೂ ವೇಡ್. ಇದಕ್ಕೆ ಕಾರಣವನ್ನೂ ಅವರ ವಿವರಿಸಿದ್ದಾರೆ. ಮುಂದೆ ಓದಿ..

ಸಂಕಷ್ಟದ ಸಂದರ್ಭದಲ್ಲಿ ಕ್ರೀಸ್‌ಗಿಳಿದಿದ್ದ ವೇಡ್
ಮ್ಯಾಥ್ಯೂ ವೇಡ್ ಕ್ರೀಸ್‌ಗಿಳಿದಾಗ ಆಸ್ಟ್ರೇಲಿಯಾ ತಂಡ ಅಕ್ಷರಶಃ ಸಂಕಷ್ಟದಲ್ಲಿತ್ತು. 96 ರನ್‌ಗಳಿಗೆ ಆಸ್ಟ್ರೇಲಿಯಾದ ಅಗ್ರ ಐವರು ಆಟಗಾರರ ವಿಕೆಟ್ ಪಡೆದ ಪಾಕಿಸ್ತಾನದ ಬೌಲರ್‌ಗಳ ಆತ್ಮವಿಶ್ವಾಸ ಉತ್ತುಂಗದಲ್ಲಿತ್ತು. ಆಸ್ಟ್ರೇಲಿಯಾ ಗೆಲುವಿಗೆ ಇನ್ನೂ 81 ರನ್‌ಗಳ ಅಗತ್ಯವಿತ್ತು. ಮಾರ್ಕಸ್ ಸ್ಟೋಯ್ನಿಸ್ ಕ್ರೀಸ್‌ನಲ್ಲಿದ್ದರು. ಇಂತಾ ಸಂದರ್ಭದಲ್ಲಿ ಮ್ಯಾಥ್ಯೂ ವೇಡ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು.

"ಇದೇ ನನ್ನ ಕೊನೆಯ ಪಂದ್ಯವಾಗಬಹುದು ಎಂದುಕೊಂಡಿದ್ದೆ"
ಇಂತಾ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ತಾನು ಸಾಕಷ್ಟು ನರ್ವಸ್ ಆಗಿದ್ದೆ ಎಂದು ಸ್ವತಃ ಮ್ಯಾಥ್ಯೂ ವೇಡ್ ಹೇಳಿಕೊಂಡಿದ್ದಾರೆ. "ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಇಳಿದಾಗ ನಾನು ಸ್ವಲ್ಪ ನರ್ವಸ್ ಆಗಿದ್ದೆ. ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಲು ಇದು ನನಗೆ ಕೊನೆಯ ಅವಕಾಶವಾಗಬಹುದು ಎಂದು ನಾನು ಭಾವಿಸಿದ್ದೆ" ಎಂದು ಪಂದ್ಯ ಮುಕ್ತಾಯದ ಬಳಿಕ ವೇಡ್ ಹೇಳಿಕೊಂಡಿದ್ದಾರೆ. "ಆ ಸಂದರ್ಭದಲ್ಲಿ ನಾನು ಉತ್ತಮ ಪ್ರದರ್ಶನ ನೀಡಲು ಮಾತ್ರವೇ ಗಮನಹರಿಸಿದೆ. ಈ ಪಂದ್ಯವನ್ನು ನಾವು ಗೆಲ್ಲಲೇ ಬೇಕೆಂದು ಬಯಸಿದ್ದೆ. ಇದು ನಮಗೆ ಇಡೀ ಪಂದ್ಯವನ್ನು ಗೆಲ್ಲಲು ಅವಕಾಶ ಮಾಡಿಕೊಟ್ಟಿತು" ಎಂದಿದ್ದಾರೆ ಮ್ಯಾಥ್ಯೂ ವೇಡ್.

ಮೂರ್ನಾಲ್ಕು ವರ್ಷಗಳ ಪ್ರಯಾಣದಲ್ಲಿ ಹೆಮ್ಮೆಯಿದೆ
ಇನ್ನು ಇದೇ ಸಂದರ್ಭದಲ್ಲಿ ಮುಂದುವರಿದು ಮಾತನಾಡಿದ ಮ್ಯಾಥ್ಯೂ ವೇಡ್ ನಾನು ಈಗ ಹಿಂದಿರುಗಿ ನೋಡಿದಾಗ ಮೂರ್ನಾಲ್ಕು ವರ್ಷಗಳ ನನ್ನ ಪ್ರಯಾಣ ಹೆಮ್ಮನೆ ಮೂಡಿಸುತ್ತಿದೆ ಎಂದಿದ್ದಾರೆ. ನನಗೆ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿಕ್ಕ ಈ ಅವಕಾಶಕ್ಕೆ ನಾನು ಸಂತೋಷಪಡುತ್ತಿದ್ದೇನೆ. ತಂಡದಿಂದ ಹೊರಗುಳಿದು ಮತ್ತೆ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಮರಳುವುದು ಹೆಚ್ಚು ಸಂತಸ ನೀಡುತ್ತದೆ. ಈಗ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದೇನೆ ಎಂದು ಭಾಸವಾಗುತ್ತಿದೆ. ನಾನು ಬ್ಯಾಟ್ಸ್‌ಮನ್ ಆಗಿ ನನ್ನನ್ನು ಕಂಡುಕೊಂಡಿದ್ದೇನೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ನಾನು ಏಳನೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ" ಎಂದು ತಮ್ಮ ಭಾವನೆಯನ್ನು ಮ್ಯಾಥ್ಯೂ ವೇಡ್ ಹಂಚಿಕೊಂಡಿದ್ದಾರೆ.

ಸತತ ಮೂರು ಸಿಕ್ಸರ್ ಬಾರಿಸಿ ಗೆಲುವು
ಪಾಕಿಸ್ತಾನ ನೀಡಿದ್ದ 177 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಮ್ಯಾಥ್ಯೂ ವೇಡ್ ಆಸರೆಯಾದರು. ಕೊನೆಯ ಎರಡು ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡ 22 ರನ್‌ಗಳನ್ನು ಗಳಿಸುವ ಸವಾಲು ಪಡೆದುಕೊಂಡಿತ್ತು. ಈ ಸಂದರ್ಭದಲ್ಲಿ 19ನೇ ಓವರ್ ಎಸೆಯಲು ಬಂದ ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ ಎಸೆತದಲ್ಲಿ ಸತತ ಮೂರಿ ಸಿಕ್ಸರ್ ಸಿಡಿಸಿದ ಮ್ಯಾಥ್ಯೂ ವೇಡ್ 19ನೇ ಓವರ್‌ನಲ್ಲಿಯೇ ಪಂದ್ಯವನ್ನು ಆಸ್ಟ್ರೇಲಿಯಾಗೆ ಗೆಲ್ಲಿಸಿಕೊಟ್ಟರು. ಈ ಮೂಲಕ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications