T20 World Cup 2022: ಈ ವಾರ ಫಿಟ್ನೆಸ್ ಪರೀಕ್ಷೆಗಾಗಿ ಎನ್‌ಸಿಎಗೆ ಹಾಜರಾಗಲಿರುವ ಮೊಹಮ್ಮದ್ ಶಮಿ

ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಈ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.
ಮೊಹಮ್ಮದ್ ಶಮಿ ಯಾವುದೇ ಗಾಯಕ್ಕೆ ಒಳಗಾಗದಿದ್ದರೂ, ಅವರು ಇತ್ತೀಚೆಗೆ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡರು, ಬಿಸಿಸಿಐ ಕಡ್ಡಾಯಗೊಳಿಸಿರುವ ಹೃದಯರಕ್ತನಾಳದ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗುವ ಅಗತ್ಯವಿದೆ.
2022 ರ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಸ್ಥಾನ ಪಡೆಯುವಲ್ಲಿ ಮೊಹಮ್ಮದ್ ಶಮಿ ಹೆಸರು ಮುಂಚೂಣಿಯಲ್ಲಿದೆ. 2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಕೊನೆಯದಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಡಿದ್ದರು. ಅದಾದ ನಂತರ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿರಲಿಲ್ಲ. ಆದರೆ, 2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡಿದ್ದ ಅವರು, ಉತ್ತಮ ಪ್ರದರ್ಶನ ನೀಡಿದ್ದರು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಮಯಕ್ಕೆ ಕೋವಿಡ್‌ನಿಂದ ಚೇತರಿಸಿಕೊಳ್ಳದ ಕಾರಣ ಅವರ ಬದಲಿಗೆ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.

ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ
ವಿಶ್ವಕಪ್ ತಂಡದಲ್ಲಿ ಬೌಲರ್‌ನ ಸಂಭಾವ್ಯ ಸೇರ್ಪಡೆಯು ಅವರ ಫಿಟ್‌ನೆಸ್ ಪರೀಕ್ಷೆಯ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
" ಮೊಹಮ್ಮದ್ ಶಮಿ ಚೇತರಿಸಿಕೊಳ್ಳುತ್ತಿದ್ದಾರೆ. ಲಘು ಅಭ್ಯಾಸವನ್ನು ಪುನರಾರಂಭಿಸಿದ್ದಾರೆ. ಆದರೆ ಸಂಪೂರ್ಣ ಫಿಟ್ ಆಗಲು ಅವರಿಗೆ ಸಮಯ ಬೇಕು. ಅವರು ಈ ವಾರ ಎನ್‌ಸಿಎಗೆ ವರದಿ ಮಾಡುತ್ತಾರೆ. ವೈದ್ಯಕೀಯ ತಂಡದ ಅನುಮತಿ ಪಡೆದಾಗ ಮಾತ್ರ ಅವರು ತಂಡವನ್ನು ಸೇರಲು ಸಾಧ್ಯವಾಗುತ್ತದೆ." ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ 2022: ಐಸಿಸಿ ಟೂರ್ನಿಗೆ 16 ಅಂಪೈರ್ ಸೇರಿ 20 ಅಧಿಕಾರಿಗಳ ಹೆಸರು ಪ್ರಕಟ; ಏಕೈಕ ಭಾರತೀಯ

ವಿಶ್ವಕಪ್‌ಗೆ ಮುನ್ನ ಒಂದೂ ಪಂದ್ಯವನ್ನಾಡದ ಶಮಿ
ಕೋವಿಡ್-19 ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮೊಹಮ್ಮದ್ ಶಮಿ ಪ್ರಸ್ತುತ ಅಲಿಗಢದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬುಮ್ರಾ ಅವರ ಬದಲಿ ಆಟಗಾರ ಎಂದು ಹೆಸರಿಸಿದರೆ, ಶಮಿ ಒಂದೇ ಒಂದು ಟಿ20 ಪಂದ್ಯವನ್ನಾಡದೆ, ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಫೈನಲ್‌ನಲ್ಲಿ ಅವರು ಚಿಕ್ಕ ಸ್ವರೂಪದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.
ಟಿ20 ವಿಶ್ವಕಪ್‌ಗೂ ಮುನ್ನ ಶಮಿ ಯಾವುದೇ ಪಂದ್ಯಗಳನ್ನು ಆಡದಿರುವುದು ನಿಜಕ್ಕೂ ಕಳವಳಕಾರಿ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚಹಾರ್, ಮೊಹಮ್ಮದ್ ಶಮಿ ನಡುವೆ ಸ್ಪರ್ಧೆ
ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಬದಲಿ ವೇಗದ ಬೌಲರ್‌ಗಾಗಿ ಹುಡುಕಾಟ ನಡೆಸಲಾಯಿತು. ಬಲಗೈ ವೇಗಿ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಗಾಯಗೊಂಡರು, ನಂತರ ಏಷ್ಯಾ ಕಪ್ 2022 ರಿಂದ ಹೊರಗುಳಿದರು ಸುಮಾರು ನಾಲ್ಕು ತಿಂಗಳ ಕಾಲ ಅವರು ಕ್ರಿಕೆಟ್‌ನಿಂದ ದೂರವಿದ್ದರು.
ಮೊಹಮ್ಮದ್ ಶಮಿ ಮತ್ತು ದೀಪಕ್ ಚಹಾರ್ ಟಿ20 ವಿಶ್ವಕಪ್ ಮುಖ್ಯ ತಂಡದಲ್ಲಿ ಬುಮ್ರಾ ಸ್ಥಾನವನ್ನು ಪಡೆದುಕೊಳ್ಳಲು ರೇಸ್‌ನಲ್ಲಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಚಹರ್ ಉತ್ತಮ ಪ್ರದರ್ಶನ ನೀಡುತ್ತಿದ್ದರೆ. ಮೊಹಮ್ಮದ್ ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
ಇವರ ಜೊತೆ ಮೊಹಮ್ಮದ್ ಸಿರಾಜ್ ಹೆಸರು ಕೂಡ ಕೇಳಿಬರುತ್ತಿದ್ದು, ಯಾರು 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ನೋಡಬೇಕಿದೆ. ಬಿಸಿಸಿಐ ಅತಿ ಶೀಘ್ರದಲ್ಲೇ ಬುಮ್ರಾ ಬದಲೀ ಆಟಗಾರನ ಹೆಸರು ಘೋಷಿಸುವುದಾಗಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications