
ಟಿ20 ವಿಶ್ವಕಪ್‌ನ ತಂಡದಲ್ಲಿ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಆರಂಭಿಕ ಆಟಗಾರ ಶಿಖರ್ ಧವನ್ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ. ಚುಟಕು ಕ್ರಿಕೆಟ್‌ನ ವಿಶ್ವಕಪ್‌ನಂತಾ ಮಹತ್ವದ ವೇದಿಕೆಯಲ್ಲಿ ಧವನ್‌ಗೆ ಕೊಕ್ ಕೊಟ್ಟ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದಲ್ಲಿ ಶಿಖರ್ ಧವನ್‌ಗೆ ಪ್ರಮುಖವಾದ ಸ್ಥಾನವಿದೆ. ಆದರೆ ಈ ಕ್ಷಣದಲ್ಲಿ ಧವನ್ ಬದಲಿಗೆ ಬೇರೊಬ್ಬ ಆಟಗಾರನ ಅಗತ್ಯ ತಂಡಕ್ಕಿದೆ. ಹೀಗಾಗಿ ಆತನಿಗೆ ವಿಶ್ರಾಂತಿಯನ್ನು ನೀಡಲಾಗಿದೆ ಎಂದಿದ್ದಾರೆ ಚೇತನ್ ಶರ್ಮಾ. 35ರ ಹರೆಯದ ಧವನ್ ಕಳೆದ ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದರು.
"ಶಿಖರ್ ಧವನ್ ನಮ್ಮ ಪಾಲಿಗೆ ಬಹಳ ಮುಖ್ಯವಾದ ಆಟಗಾರನಾಗಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ತಂಡದ ನಾಯಕನಾಗಿದ್ದರು ಧವನ್. ನಮ್ಮಲ್ಲಿ ಯಾವೆಲ್ಲಾ ಚರ್ಚೆಗಳು ಆಯಿತು ಎಂಬ ಬಗ್ಗೆ ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರು ಮುಖ್ಯವಾದ ಆಟಗಾರ ಹಾಗೂ ನಮ್ಮ ಆದ್ಯತೆಯಲ್ಲಿ ಅವರು ಇದ್ದಾರೆ" ಎಂದಿದ್ದಾರೆ ಚೇತನ್ ಶರ್ಮಾ.
"ಆದರೆ ಈ ಕ್ಷಣದಲ್ಲಿ ನಾವು ಬೇರೆ ಆಟಗಾರರತ್ತ ದೃಷ್ಠಿಯಿಟ್ಟಿದ್ದೇವೆ ಹಾಗೂ ಧವನ್‌ಗೆ ವಿಶ್ರಾಂತಿಯನ್ನು ನೀಡಲಾಗಿದೆ. ಇದನ್ನು ಹೊರತು ಪಡಿಸಿ ನಮಗೆ ಆತ ಬಹಳ ಮುಖ್ಯವಾದ ಆಟಗಾರ ಹಾಗೂ ಆತ ಶೀಘ್ರವಾಗಿ ತಂಡಕ್ಕೆ ವಾಪಾಸಾಗಲಿದ್ದಾರೆ" ಎಂದು ಚೇತನ್ ಶರ್ಮಾ ತಮ್ಮ ಮೊದಲ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿಖರ್ ಧವನ್ ಬದಲಿಗೆ ಆರಂಭಿಕನಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಇಶಾನ್ ಕಿಶನ್ ಮೂರನೇ ಆರಂಭಿಕ ಆಟಗಾರನಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. "ನಾವು ಈಗ ಮೂವರು ಆರಂಭಿಕರನ್ನು ಹೊಂದಿದ್ದೇವೆ. ರೋಹಿತ್ ಶರ್ಮಾ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್. ಇಶಾನ್ ಕಿಶನ್ ಆರಂಭಿಕನಾಗಿ ಮಾತ್ರವಲ್ಲದೆ ಐದನೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ನಡೆಸಬಲ್ಲರು. ಹೀಗಾಗಿ ಕಿಶನ್ ನಮಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತಾರೆ. ಆತ ಸ್ಪಿನ್ನರ್ ವಿರುದ್ಧ ಉತ್ತಮ ಆಡಬಲ್ಲ ಆಟಗಾರನಾಗಿರುವ ಕಾರಣದಿಂದಾಗಿ ಮಧ್ಯಮ ಕ್ರಮಾಂಕದಲ್ಲಿಯೂ ಉಪಯುಕ್ತ ಆಟಗಾರನಾಗುತ್ತಾರೆ" ಎಂದು ಚೇತನ್ ಶರ್ಮಾ ವಿವರಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ವಿಚಾರವಾಗಿಯೂ ಶರ್ಮಾ ಪ್ರತಿಕ್ರಿಯಿಸಿದರು. "ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವುದು ತಮಡದ ಮ್ಯಾನೇಜ್‌ಮೆಮಟ್‌ನ ನಿರ್ಧಾರವಾಗಿರಲಿದೆ. ಆದರೆ ಈಗ ನಾವು ಆರಂಭಿಕರಾಗಿ ಮೂವರನ್ನು ಆಯ್ಕೆ ಮಾಡಿದ್ದೇವೆ. ವಿರಾಟ್ ಕೊಹ್ಲಿ ತಮಡದ ಪಾಲಿಗೆ ದೊಡ್ಡ ಅಸ್ತ್ರ. ಆತ ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿಯುವಾದ ಆತನೇ ನಿರ್ಣಾಯಕ ಪಾತ್ರವಹಿಸುತ್ತಾರೆ" ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಆದರೆ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ತಂಡ ಸಮಯ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಮಾಡಲಿದೆ ಎಂದಿದ್ದಾರೆ ಶರ್ಮಾ. ಟಿ20 ವಿಶ್ವಕೊ್ ಅಕ್ಟೋಬರ್ 17ರಿಂದ ಯುಎಇನಲ್ಲಿ ಆರಂಭವಾಗಲಿದೆ. ಭಾರತ ಅಕ್ಟೋಬರ್ 24ರಂದು ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರಿತ್ ಬೂಮ್ರ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್