
ಈ ಬಾರಿಯ ವಿಶ್ವಕಪ್‌ನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ರೋಚಕ ಹಣಾಹಣಿಯಲ್ಲಿ ಸೋಲು ಕಂಡಿತು. ಈ ಮೂಲಕ ಫೈನಲ್‌ಗೇರುವ ಪ್ರಯತ್ನದಲ್ಲಿ ವಿಫಲವಾಯಿತು. ಈ ಸೋಲಿನ ನಂತರ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕೆಲ ಆಟಗಾರರನ್ನು ಗುರಿಯಾಗಿರಿಸಿ ಕಟು ಟೀಕೆಯನ್ನು ಮಾಡುತ್ತಿದ್ದಾರೆ. ಈ ಘಟನೆಗೆ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ವರ್ತನೆಗೆ ಇನ್ಜಮಾಮ್ ಉಲ್ ಹಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ತಂಡದ ಅಭಿಮಾನಿಗಳು ಸೋಲನ್ನು ಗೌರವಯುತವಾಗಿ ಸ್ವೀಕರಿಸುವುದನ್ನು ಕಲಿಯಬೇಕು ಹಾಗೂ ತಂಡದ ಪ್ರದರ್ಶನಕ್ಕೆ ಅಭಿನಂದನೆಯನ್ನು ಸಲ್ಲಿಸಬೇಕು ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ. ಅಲ್ಲದೆ ಯುಎಇಯಿಂದ ಮರಳುವ ತಂಡದ ಆಟಗಾರರನ್ನು ಸ್ವಾಗತಿಸಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ಪಾಕಿಸ್ತಾನದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಇನ್ಜಮಾಮ್ ಉಲ್ ಹಕ್. ಈ ಸಂದರ್ಭದಲ್ಲಿ ಅವರು ತಾವು ಹಾಗೂ ಪಾಕಿಸ್ತಾನ ತಂಡದ ಕೆಲ ಆಟಗಾರರು ದೊಡ್ಡ ಟೂರ್ನಿಗಳಲ್ಲಿ ಸೋಲು ಕಂಡ ನಂತರ ತವರಿಗೆ ಮರಳಲು ಎಷ್ಟು ಆತಂಕವನ್ನು ಪಡುತ್ತಿದ್ದರು ಎಂದು ವಿವರಿಸಿದ್ದಾರೆ. ಆಸ್ಟ್ರೇಲಿಯಾ ತಮಡದ ಅಭಿಮಾನಿಗಳು ಇಂತಾ ಟೂರ್ನಿಗಳಲ್ಲಿ ಸೋಲು ಕಂಡರೆ ಈ ರೀತಿಯಾಗಿ ಖಂಡಿಯಾ ಟೀಕಿಸಲಾರರು ಎಂದಿದ್ದಾರೆ.
"ನಾನು ಪಾಕಿಸ್ತಾನ ತಂಡದ ಪರವಾಗಿ 5-6 ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದೇನೆ. ನಮ್ಮಲ್ಲಿ ಯಾವಾಗಲೂ ಸೋತರೆ ಏನಾಗಲಿದೆ ಎಂಬ ಭಯ ಯಾವಾಗಲೂ ಇರುತ್ತಿತ್ತು. ಆಸ್ಟ್ರೇಲಿಯಾ ತಂಡ ಆಗ ಸಾಕಷ್ಟು ಯಶಸ್ಸು ಗಳಿಸುತ್ತಿದ್ದ ತಂಡವಾಗಿತ್ತು. ಆದರೆ ದೊಡ್ಡ ಪಂದ್ಯಗಳಲ್ಲಿ ಅವರು ಸೋತಾಗಲೂ ಏರ್‌ಪೋರ್ಟ್‌ಗಳಲ್ಲಿ ಅವರನ್ನು ಸ್ವಾಗತಿಸಲು ಅಬಿಮಾನಿಗಳು ಸೇರುತ್ತಿದ್ದರು. ನಾವು 1999ರಲ್ಲಿ ವಿಶ್ವಕಪ್ ಫೈನಲ್ ಪಮದ್ಯವನ್ನು ಸೋತಾಗ ಸಾಕಷ್ಟು ಟೀಕೆಯನ್ನು ಎದುರಿಸಿದ್ದೆವು. ನಾವು ಸೋಲನ್ನು ಗೌರವಯುತವಾಗಿ ಸ್ವೀಕರಿಸಬೇಕಿದೆ ಮತ್ತು ತಂಡವನ್ನು ಅಭಿನಂದಿಸಬೇಕಿದೆ. ಯಾಕೆಂದರೆ ಅವರು ನಿಜವಾಗಿಯೂ ಅದ್ಭುತವಾದ ಕ್ರಿಕೆಟ್ ಆಡಿದ್ದಾರೆ" ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಇನ್ಜಮಾಮ್ ಉಲ್ ಹಕ್ 1996ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ ಸೋತಾಗಲೂ ಆಸ್ಟ್ರೇಲಿಯಾ ತಂಡಕ್ಕೆ ದೊರೆತ ಅದ್ಭತವಾದ ಸ್ವಾಗತವನ್ನು ಇನ್ಜಮಾಮ್ ನೆನಪಿಸಿದ್ದಾರೆ. "ನಾನು ಒಂದು ಘಟನೆಯನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. 1996ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾಗೆ ಶರಣಾಗಿತ್ತು. ಆದರೆ ಅವರಿಗೆ ತವರಿನಲ್ಲಿ ಅದ್ಭುತವಾದ ಸ್ವಾಗತ ದೊರೆತಿತ್ತು. ಹಾಗಾಗಿ ನಾವು ಕೂಡ ಅವರಿಗೆ ಉತ್ತಮವಾದ ಸ್ವಾಗತವನ್ನು ನೀಡಬೇಕಿದೆ. ಸೆಮಿಫಯನಲ್‌ನಲ್ಲಿ ಸೋಲು ಕಂಡರು ಎಂಬ ಕಾರಣಕ್ಕೆ ಟೀಕಿಸುವುದು ಸರಿಯಲ್ಲ. ಅವರು ಅದ್ಭುತವಾದ ಕ್ರಿಕೆಟ್ ಆಡಿದ್ದಾರೆ, ಇಡೀ ದೇಶಕ್ಕೆ ಅವರು ಸ್ಪೂರ್ತಿಯನ್ನು ನೀಡಿದ್ದಾರೆ" ಎಂದು ಇನ್ಜಮಾಮ್ ಉಲ್ ಹಕ್ ಪಾಕಿಸ್ತಾನ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಈ ಬಾರಿಯ ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಭಾರತ, ನ್ಯೂಜಿಲಂಡ್, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡವನ್ನು ಮಣಿಸಿ ಅಜೇಯವಾಗಿ ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಈ ಐದು ಪಂದ್ಯಗಳಲ್ಲಿ ಪಾಕಿಸ್ತಾನ ಗಳಿಸಿದ ಗೆಲುವಿನಿಂದ ಇಡೀ ದೇಶವೇ ಒಗ್ಗಟ್ಟಾಗಿತ್ತು ಎಂದಿದ್ದಾರೆ ಇನ್ಜಮಾಮ್. "ಕೇವಲ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಾತ್ರವೇ ಒಂದಾಗಿರಲಿಲ್ಲ. ಇಡೀ ಪಾಕಿಸ್ತಾನ ದೇಶವೇ ಈ ಐದು ಗೆಲುವುಗಳಲ್ಲಿ ಒಂದಾಗಿತ್ತು. ಈ ಗೆಲುವು ಹಾಗೂ ಸೋಲು ಕೇವಲ 11 ಆಟಗಾರರದ್ದಲ್ಲ. ಇದು ಪಾಕಿಸ್ತಾನದ ಗೆಲುವು ಹಾಗೂ ಪಾಕಿಸ್ತಾನದ ಸೋಲು. ನಾವೆಲ್ಲರೂ ಅವರೊಂದಿಗೆ ಇರೋಣ, ಅದೊಂದು ಶ್ರೇಷ್ಠವಾದ ಅನುಭವ" ಎಂದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳನ್ನು ಉದ್ದೇಶಿಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಹೇಳಿಕೆ ನೀಡಿದ್ದಾರೆ.