ಟಿ20 ವಿಶ್ವಕಪ್: ವಿಂಡೀಸ್ ವಿರುದ್ಧ ಕ್ವಿಂಟನ್ ಡಿ ಕಾಕ್ ಆಡದಿರಲು ಕಾರಣ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಆ ಸೂಚನೆ!

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇಂದು ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದ ಆಡುವ ಬಳಗದಿಂದ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ ಕ್ವಿಂಟನ್ ಡಿಕಾಕ್ ಹೊರಗುಳಿದಿದ್ದಾರೆ. ಟಾಸ್ ಪ್ರಕ್ರಿಯೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ವೈಯಕ್ತಿಕ ಕಾರಣಗಳಿಗಾಗಿ ಸ್ವತಃ ಕ್ವಿಂಟನ್ ಡಿಕಾಕ್ ಅವರೇ ಈ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಕ್ವಿಂಟನ್ ಡಿ ಕಾಕ್ ಅವರ ಈ ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತೆಗೆದುಕೊಂಡಿರುವ ಒಂದು ನಿರ್ಧಾರ ಎಂಬುದು ವರದಿಯಾಗಿದೆ.
ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲ: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಮುಂಬರುವ ಎಲ್ಲಾ ಪಂದ್ಯಗಳಲ್ಲಿಯೂ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲವನ್ನು ನೀಡುವುದಾಗಿ ಘೋಷಿಸಿದೆ. ಇದರ ಭಾಗವಾಗಿ ಪಂದ್ಯದ ಆರಂಭದ ನಂತರ ಆಟಗಾರರು ಮೊಣಕಾಲೂರಿ ಈ ಅಭಿಯಾನಕ್ಕೆ ಬೆಂಬಲಿಸಬೇಕಿದೆ. ಭಾರತ ಸೇರಿದಂತೆ ಬಹುತೇಕ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಈ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನದಲ್ಲಿ ಕೈ ಜೋಡಿಸಿದೆ.

ಅಭಿಯಾನಕ್ಕೆ ಬೆಂಬಲಿಸಲು ಡಿಕಾಕ್ ನಕಾರ
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸೋಮವಾರ ರಾತ್ರಿ ಹೊರಡಿಸಿದ ಈ ಸೂಚನೆಗೆ ಕ್ವಿಂಟನ್ ಡಿಕಾಕ್ ಅಸಮ್ಮತಿಯನ್ನು ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಕ್ವಿಂಟನ್ ಡಿಕಾಕ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲು ಕಾರಣವಾಗಿದೆ ಎಂದು ವರದಿಯಾಗಿದೆ. ಆದರೆ ಕ್ವಿಂಟನ್ ಡಿಕಾಕ್ ಈ ಬಗ್ಗೆ ಅಧಿಕೃತವಾಗಿ ಕಾರಣವನ್ನು ನೀಡಿಲ್ಲ.

ಈ ಹಿಂದೆಯೂ ಮೊಣಕಾಲೂರಲು ಒಪ್ಪಿರಲಿಲ್ಲ ಡಿ ಕಾಕ್
ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರನಾಗಿರುವ ಕ್ವಿಂಟನ್ ಡಿ ಕಾಕ್ ಈ ಹಿಂದೆಯೂ ಮೊಣಕಾಲೂರಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲಿಸಿರಲಿಲ್ಲ. ಈ ಬಗ್ಗೆ ಸೈಂಟ್ ಲೂಸಿಯಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್‌ನ ಸಂದರ್ಭದಲ್ಲಿ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಡಿಕಾಕ್ ಬಳಿ ಪತ್ರಕರ್ತರೊಬ್ಬರು ಕಾರಣವನ್ನು ಕೇಳಿದ್ದರು. ಈ ಸಂದರ್ಭದಲ್ಲಿ ಕ್ವಿಂಟನ್ ಡಿ ಕಾಕ್ ಕಾರಣವನ್ನು ನೀಡಲು ನಿರಾಕರಿಸಿದ್ದರೂ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದರು. "ನನ್ನ ನಿರ್ಧಾರಕ್ಕೆ ಕಾರಣ? ನಾನು ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಬಯಸುತ್ತೇನೆ. ಇದು ನನ್ನದೇ ಆದ ವೈಯಕ್ತಿಕ ನಿರ್ಧಾರ. ಇದು ಎಲ್ಲರ ನಿರ್ಧಾರವಾಗಿದೆ. ಯಾರು ಕೂಡ ಯಾರ ಜೀವನದಲ್ಲಿಯೂ ಯಾವುದಕ್ಕೂ ಒತ್ತಾಯಿಸುವಂತಿಲ್ಲ. ಇದು ನಾನು ವಿಷಯಗಳನ್ನು ನೋಡುವ ರೀತಿ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಹಿನ್ನಲೆ
2020ರಲ್ಲಿ ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ವ್ಯಕ್ತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಮೊಣಕಾಲಿನಲ್ಲಿ ಅದುಮಿ ಆತ ಉಸಿರುಗಟ್ಟಿ ಸಾಯಲು ಕಾರಣರಾಗಿದ್ದರು. ಇದು ವಿಶ್ವಾದ್ಯಂತ ವರ್ಣಬೇಧ ನೀತಿಯ ವಿರುದ್ಧ ಹೋರಾಟಕ್ಕೆ ಕಾರಣವಾಯಿತು. ಅಮೆರಿಕಾದಲ್ಲಿ ದೊಡ್ಡ ಹಿಂಸಾಚಾರವೇ ನಡೆಯಿತು. ಬಳಿಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನ ವಿಶ್ವಾದ್ಯಂತ ಆರಂಭವಾಯಿತು. ಕ್ರಿಕೆಟ್ ಫುಟ್ಬಾಲ್ ಸೇರಿದಂತೆ ಕ್ರೀಡಾಲೋಕವೂ ಈ ಅಭಿಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿತ್ತು. ಅದರ ಭಾಗವಾಗಿಯೇ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿಯೂ ಈ ಅಭಿಯಾನಕ್ಕೆ ಬೆಂಬಲ ಸೂಚಿಸಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications