ಈ 3 ಅಂಶಗಳು ಭಾರತ ಅಂದುಕೊಂಡಂತೆ ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಕಟ್ಟಿಟ್ಟ ಬಿತ್ತಿ!

ಟಿ20 ವಿಶ್ವಕಪ್‌ನಲ್ಲಿ ಭಾರತ ಅದ್ಭುತ ಆರಂಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಈ ಆರಂಭವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ. ಆದರೆ ಈ ಹಂತದಲ್ಲಿ ಟೀಮ್ ಇಂಡಿಯಾಗೆ ಕಠಿಣ ಸವಾಲೊಂದು ಎದುರಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಮೂರನೇ ಪಂದ್ಯದಲ್ಲಿ ಸವಾಲೊಡ್ಡುತ್ತಿರುವುದು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ. ಹೀಗಾಗಿ ಈ ಪಂದ್ಯದಲ್ಲಿ ರೋಹಿತ್ ಪಡೆಯ ಪ್ರದರ್ಶನ ಹೇಗಿರಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ನಂತರ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸುಲಭ ಗೆಲುವು ಪಡೆದುಕೊಂಡಿದೆ. ಈಗ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ರೋಹಿತ್ ಪಡೆಗೆ ಮುಖಾಮುಖಿಯಾಗಿತ್ತಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿ ಅದ್ಭುತ ತಂಡವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಸರಿಯಾದ ಯೋಜನೆಗಳೊಂದಿಗೆ ಕಣಕ್ಕಿಳಿದರೆ ಮಾತ್ರವೇ ಯಶಸ್ಸು ಸಾಧ್ಯ.
ಇನ್ನು ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಈ ಮೂರು ವಿಚಾರಗಳಲ್ಲಿ ಯಶಸ್ಸು ಸಾಧಿಸಿದರೆ ಟೀಮ್ ಇಂಡಿಯಾವನ್ನು ಕಟ್ಟಿಹಾಕುವುದು ದಕ್ಷಿಣ ಆಫ್ರಿಕಾ ಪಾಲಿಗೆ ಅಸಾಧ್ತವೆನಿಸಲಿದೆ. ಹಾಗಾದರೆ ಆ ಮೂರು ಅಂಶಗಳು ಯಾವುದು? ಮುಂದೆ ಓದಿ..

ಪವರ್‌ಪ್ಲೇನಲ್ಲಿ ಸಿಡಿಯಬೇಕು ರೋಹಿತ್- ರಾಹುಲ್
ಟೀಮ್ ಇಂಡಿಯಾಗೆ ಸದ್ಯ ತಲೆ ನೋವಾಗಿರುವುದು ಪವರ್‌ಪ್ಲೇನಲ್ಲಿನ ಬ್ಯಾಟಿಂಗ್ ಪ್ರದರ್ಶನ. ಈ ಅವಧಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಯೂ ಭಾರತ ತಂಡ ಹಿನ್ನಡೆ ಅನುಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಈ ಅವಧಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕಾದರೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜೋಡಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಬೇಕಿದೆ. ದಕ್ಷಿಣ ಆಫ್ರಿಕಾ ತಂಡದ ಬಲಿಷ್ಠ ಬೌಲಿಂಗ್ ವಿರುದ್ಧ ಯಶಸ್ಸು ಸಾಧಿಸಬೇಕಾದರೆ ಈ ಅವಧಿ ಭಾರತ ತಂಡಕ್ಕೆ ಬಹಳ ಮುಖ್ಯವೆನಿಸಲಿದೆ.

ನೋರ್ಕಿಯಾ- ರಬಾಡಾ ವಿರುದ್ಧ ಪ್ರತಿತಂತ್ರ
ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗದಲ್ಲಿ ಪ್ರಮುಖವಾಗಿರುವ ಎರಡು ಅಸ್ತ್ರಗಳೆಂದರೆ ಅನ್ರಿಕ್ ನೋರ್ಕಿಯಾ ಹಾಗೂ ಕಗಿಸೋ ರಬಡಾ ಜೋಡಿ. ಆಸ್ಟ್ರೇಲಿಯಾದ ಬೌನ್ಸಿ ಪಿಚ್ ಈ ಜೋಡಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಇಂಥಾ ಪರಿಸ್ಥಿತಿಯಲ್ಲಿ ಭಾರತ ತಂಡ ಪ್ರಬಲ ಪ್ರತಿತಂತ್ರದೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯವಾಗಲಿದೆ. ಈ ಜೋಡಿಯ ಸವಾಲನ್ನು ಮೆಟ್ಟಿ ನಿಲ್ಲಲು ಭಾರತ ತಂಡ ಯಶಸ್ವಿಯಾದರೆ ಪಂದ್ಯ ಬಹುತೇಕ ಭಾರತದ ಹಿಡಿತಕ್ಕೆ ಸಿಕ್ಕಂತೆ. ಹಾಗಂತ ಈ ಬೌಲಿಂಗ್ ಜೋಡಿಯ ವಿರುದ್ಧ ರಕ್ಷಣಾತ್ಮಕ ಆಟಕ್ಕೆ ಮುಂದಾದರೆ ತಂಡಕ್ಕೆ ಅದು ಕೂಡ ಹಿನ್ನಡೆಯಾಗಬಹುದು. ಹೀಗಾಗಿ ರೋಹಿತ್ ಪಡೆ ಈ ಜೋಡಿಗೆ ಹೇಗೆ ಪ್ರತ್ಯುತ್ತರ ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ.

ಡೆತ್ ಓವರ್‌ನಲ್ಲಿ ಯಶಸ್ಸು
ಇನ್ನು ಟೀಮ್ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಇತ್ತೀಚಿನ ದಿನಗಳಲ್ಲಿ ಡೆತ್ ಓವರ್‌ಗಳು ಸಾಕಷ್ಟು ಕಾಡುತ್ತಿದೆ. ಏಷ್ಯಾ ಕಪ್‌ನಲ್ಲಿ ಭಾರತ ಈ ಹಂತದಲ್ಲಿಯೇ ಹಿನ್ನಡೆ ಅನುಭವಿಸಿದ್ದು ಗೊತ್ತೇ ಇದೆ. ಇನ್ನು ವಿಶ್ವಕಪ್‌ನಲ್ಲಿಯೂ ಪಾಕಿಸ್ತಾನದ ವಿರುದ್ಧ ಆರಂಭಿಕ ಹಂತದಲ್ಲಿ ಅದ್ಭುತ ಬೌಲಿಂಗ್ ದಾಳಿಯ ಹೊರತಾಗಿಯೂ ಡೆತ್ ಈ ಓವರ್‌ನಲ್ಲಿ ನಿರೀಕ್ಷಿಸಿದಕ್ಕಿಂತ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದು ಪಾಕಿಸ್ತಾನ ತಂಡ ಭಾರತಕ್ಕೆ ಸವಾಲಿನ ಗುರಿ ನೀಡಲು ಕಾರಣವಾಗಿತ್ತು ಎಂಬುದು ಗಮನಿಸಬೇಕಿದೆ. ಹೀಗಾಗಿ ಡೆತ್ ಓವರ್‌ನಲ್ಲಿ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನ ಮತ್ತಷ್ಟು ತೀಕ್ಷ್ಣವಾಗಬೇಕಿದೆ.

ಟೀಮ್ ಇಂಡಿಯಾ ಸಂಪೂರ್ಣ ಸ್ಕ್ವಾಡ್
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications