ಟಿ20 ವಿಶ್ವಕಪ್: ನೀಡಿದ್ದು ಕೇವಲ 2 ರನ್, ಪಡೆದದ್ದು 4 ವಿಕೆಟ್!; ಚಾಂಪಿಯನ್ಸ್ ಬೆವರಿಳಿಸಿದ ಇಂಗ್ಲೆಂಡ್ ಬೌಲರ್

ಕಳೆದ ಭಾನುವಾರ ( ಅಕ್ಟೋಬರ್ 17 ) ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಚಾಲನೆ ಪಡೆದುಕೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಇಂದಿನಿಂದ ( ಅಕ್ಟೋಬರ್ 23 ) ಆರಂಭಗೊಂಡಿವೆ. ಇನ್ನು ಸೂಪರ್ 12 ಸುತ್ತಿನ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸಿದ್ದು ಆಸ್ಟ್ರೇಲಿಯಾ ತಂಡ 5 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದೇ ದಿನದಂದು ಸೂಪರ್ 12 ಹಂತದ ಎರಡನೇ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ಸ್ ಇಂಗ್ಲೆಂಡ್ ಮತ್ತು ಹಾಲಿ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು ಸೆಣಸಾಟ ನಡೆಸಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಈ 14ನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ವೆಸ್ಟ್ ಇಂಡೀಸ್ ತಂಡಕ್ಕೆ ನೀಡಿದರು. ಘಟಾನುಘಟಿ ಬ್ಯಾಟ್ಸ್‌ಮನ್‌ಗಳೇ ತುಂಬಿರುವ ವೆಸ್ಟ್ ಇಂಡೀಸ್ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲಿದೆ ಎಂದೇ ಎಲ್ಲರೂ ಊಹಿಸಿದ್ದರು.
ಆದರೆ ಈ ಊಹೆಗಳನ್ನೆಲ್ಲ ಇಂಗ್ಲೆಂಡ್ ತಂಡದ ಬೌಲರ್‌ಗಳು ತಲೆಕೆಳಗಾಗಿ ಮಾಡಿದ್ದು ಹಾಲಿ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಎನಿಸಿಕೊಂಡಿರುವ ವೆಸ್ಟ್ ಇಂಡೀಸ್ ತಂಡವನ್ನು 55 ರನ್‌ಗಳಿಗೆ ಆಲ್ ಔಟ್ ಮಾಡುವುದರ ಮೂಲಕ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ವೆಸ್ಟ್ ಇಂಡೀಸ್ ತಂಡದ ಪರ ಕ್ರಿಸ್ ಗೇಲ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗೂ ಕೂಡ ಎರಡಂಕೆ ಮುಟ್ಟಲು ಬಿಡದ ಇಂಗ್ಲೆಂಡ್ ಬೌಲರ್‌ಗಳು 14.2 ಓವರ್‌ಗಳಲ್ಲಿಯೇ ವೆಸ್ಟ್ ಇಂಡೀಸ್ ತಂಡವನ್ನು 55 ರನ್‌ಗಳಿಗೆ ಆಲ್ ಔಟ್ ಮಾಡಿದರು.
ಈ ಪಂದ್ಯದಲ್ಲಿ ವಿಶೇಷವಾಗಿ ಇಂಗ್ಲೆಂಡ್ ತಂಡದ ಬೌಲರ್ ಆದಿಲ್ ರಶೀದ್ ಪ್ರತಿಯೊಬ್ಬ ಬೌಲರ್ ಮಾಡಬೇಕೆನ್ನುವ ಕನಸಿನ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಈ ಪಂದ್ಯದ ಮತ್ತಷ್ಟು ವಿವರ ಮುಂದಿದೆ ಓದಿ.

ವೆಸ್ಟ್ ಇಂಡೀಸ್ ಬೆವರಿಳಿಸಿದ ಆದಿಲ್ ರಶೀದ್
ಇಂಗ್ಲೆಂಡ್ ತಂಡದ ಬಲಗೈ ಲೆಗ್ ಬ್ರೇಕ್ ಬೌಲರ್ ಆಗಿರುವ ಆದಿಲ್ ರಶೀದ್ ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ 2.2 ಓವರ್ ಬೌಲಿಂಗ್ ಮಾಡಿದರು. ಹೀಗೆ ಕೇವಲ 14 ಎಸೆತಗಳನ್ನು ಎಸೆದ ಆದಿಲ್ ರಶೀದ್ 12 ಡಾಟ್ ಬಾಲ್ ಎಸೆದು, ಕೇವಲ 2 ರನ್ ನೀಡಿ 4 ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ 0.9 ಎಕಾನಮಿಯಲ್ಲಿ ಬೌಲಿಂಗ್ ಪ್ರದರ್ಶನ ಮಾಡಿ ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಮತ್ತು ಸ್ಫೋಟಕ ಆಟಗಾರ ಆ್ಯಂಡ್ರೆ ರಸೆಲ್ ಅವರ ವಿಕೆಟ್‍ಗಳನ್ನು ಕಬಳಿಸಿದ ಆದಿಲ್ ರಶೀದ್ ಒಬೆಡ್ ಮೆಕ್ಕಾಯ್ ಮತ್ತು ರವಿ ರಾಂಪಾಲ್ ಅವರ ವಿಕೆಟ್‍ಗಳನ್ನು ಕೂಡ ಪಡೆದರು.

6 ವಿಕೆಟ್‍ಗಳ ಜಯ ಸಾಧಿಸಿದ ಇಂಗ್ಲೆಂಡ್
ವೆಸ್ಟ್ ಇಂಡೀಸ್ ತಂಡ ನೀಡಿದ 56 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 8.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿದೆ. ಇಂಗ್ಲೆಂಡ್ ಪರ ಜೇಸನ್ ರಾಯ್ 11, ಜಾನಿ ಬೈರ್ ಸ್ಟೋವ್ 9, ಮೊಯಿನ್ ಅಲಿ 3, ಲಿಯಾಮ್ ಲಿವಿಂಗ್ ಸ್ಟೋನ್ 1 ರನ್ ಗಳಿಸಿದರೆ ಜೋಸ್ ಬಟ್ಲರ್ ಅಜೇಯ 24 ಮತ್ತು ತಂಡದ ನಾಯಕ ಇಯಾನ್ ಮಾರ್ಗನ್ ಅಜೇಯ 7 ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ 8.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿ ಅಮೋಘ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮೊಯಿನ್ ಅಲಿ
ಇಂಗ್ಲೆಂಡ್ ತಂಡದ ಪರ 4 ಓವರ್ ಬೌಲಿಂಗ್ ಮಾಡಿದ ಮೊಯಿನ್ ಅಲಿ 17 ರನ್ ನೀಡಿ, 1 ಮೇಡನ್ ಓವರ್ ಮಾಡಿ, 2 ಪ್ರಮುಖ ವಿಕೆಟ್ ಪಡೆಯುವುದರ ಮೂಲಕ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರರಾದ ಸಿಮೊನ್ಸ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ಅವರ ವಿಕೆಟ್‍ಗಳನ್ನು ಮೊಯಿನ್ ಅಲಿ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications