ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ನಡೆದಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವಕಪ್‌ನಲ್ಲಿ ಆ ಒಂದು ಕ್ಯಾಚ್ ವಿವಾದ ಸೃಷ್ಟಿಸಿತ್ತು. ಈಗ ಟೀಮ್ ಇಂಡಿಯಾ ವಿಶ್ವಕಪ್ ತೆಗೆದುಕೊಂಡು ಭಾರತಕ್ಕೆ ಬಂದಿದ್ದು ಆಗಿದೆ. ಸೆಲೆಬ್ರೇಷನ್ ಸಹ ಮುಗಿದಿದೆ. ಆದರೂ ಈ ಕ್ಯಾಚ್ ಬಗ್ಗೆ ಚರ್ಚೆ ನಿಂತಿಲ್ಲ.
ಹಾರ್ದಿಕ್ ಪಾಂಡ್ಯ 20ನೇ ಓವರ್ ಬೌಲಿಂಗ್ ಮಾಡಲು ಬಂದರು. ಎಲ್ಲರ ಚಿತ್ತ ಹಾರ್ದಿಕ್ ಅವರ ಮೇಲೆ ಇತ್ತು. ಈ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಮಾಡುತ್ತಾ ಇದ್ದರು. ಲಾಂಗ್ ಆಫ್ ಮೇಲೆ ಮಿಲ್ಲರ್ ಚೆಂಡನ್ನು ಬಾರಿಸಿದರು. ಅಲ್ಲಿಯೆ ಫೀಲ್ಡ್ ಮಾಡ್ತಾ ಇದ್ದ ಸೂರ್ಯಕುಮಾರ್ ಯಾದವ್ ಅಮೋಘ ಕ್ಯಾಚ್ ಹಿಡಿದರು.

ಈ ಕ್ಯಾಚ್ ನಿಜಕ್ಕೂ ಪಂದ್ಯದ ಚಿತ್ರಣವನ್ನೇ ಬದಲಿ ಮಾಡಿತು. ಈ ಕ್ಯಾಚ್ ಬಗ್ಗೆ ಸಾಕಷ್ಟು ಚರ್ಚೆಗಳು ಹಾಗೂ ವಿವಾದಗಳು ಹುಟ್ಟಿಕೊಂಡವು. ಈಗ ಈ ಕ್ಯಾಚ್ ಬಗ್ಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಸ್ಪಿನ್ ಬೌಲರ್ ತಬ್ರೇಜ್ ಶಂಸಿ, ಕೊನೆಯ ಓವರ್‌ನಲ್ಲಿ ಸೂರ್ಯ ಹಿಡಿದ ಕ್ಯಾಚ್ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ಜೊತೆಗೆ ಅವರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ರೀತಿಯಲ್ಲೇ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕ್ಯಾಚ್‌ನ್ನು ಪರಿಶೀಲಿಸಲು ಈ ಕ್ರಮವನ್ನು ತೆಗೆದುಕೊಂಡಿದ್ದರೆ ನಟೌಟ್ ಎಂದು ನೀಡಬಹುದಿತ್ತು ಎಂದು ತಿಳಿಸಿದ್ದಾರೆ.

ಶಂಸಿ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಒಂದು ಮ್ಯಾಚ್‌ನ ದೃಶ್ಯ ಇದೆ. ಈ ವಿಡಿಯೋದಲ್ಲಿ ಬೌಲರ್ ಬೌಲ್ ಮಾಡಿದಾಗ, ಬ್ಯಾಟರ್ ಅದನ್ನು ಸಿಕ್ಸರ್‌ಗೆ ಬಾರಿಸುತ್ತಾನೆ. ಆದರೆ ಆಗ ಅಲ್ಲಿಯೇ ಇದ್ದ ಫೀಲ್ಡರ್ ಒಬ್ಬ ಅದನ್ನು ಕ್ಯಾಚ್ ಹಿಡಿಯುತ್ತಾನೆ. ಅಷ್ಟೇ ಅಲ್ಲದೆ, ಎಲ್ಲರನ್ನು ಕರೆಯುತ್ತಾನೆ. ಅಲ್ಲಿ ಇದ್ದವರೆಲ್ಲಾ ಆ ಕಡೆಗೆ ಓಡುತ್ತಾರೆ. ಎಲ್ಲರ ಬಂದು ಹಗ್ಗದ ಸಹಾಯದಿಂದ ಕ್ಯಾಚ್ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ನೋಡುತ್ತಾರೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆಯೂ ಇದೇ ರೀತಿ ಮಾಡಬೇಕಾಗಿತ್ತು ಎಂದು ಶಂಸಿ ಟ್ವೀಟ್ ಮಾಡಿದ್ದಾರೆ. ಶಮ್ಸಿ ಅವರ ಪೋಸ್ಟ್ ವೈರಲ್ ಆದ ತಕ್ಷಣ, ಜನರು ಅವರನ್ನು ಟ್ರೋಲ್ ಮಾಡಿದ್ದಾರೆ. ಅಲ್ಲದೆ ಶಂಸಿ ಇದಕ್ಕೆ ಸ್ಪಷ್ಟನೆ ನೀಡದ್ದು, ಇದು ತಮಾಷೆಗೆ ಆಗಿತ್ತು ಎಂದು ತಿಳಿಸಿದ್ದಾರೆ. ಇನ್ನು ಕೆಲವರಿಗೆ ಇದು ಜೋಕ್ ಎಂದು ಅರ್ಥವಾಗಿಲ್ಲ. ನಾಲ್ಕು ವರ್ಷದ ಮಗುವಿಗೆ ತಿಳಿಸಿದ ರೀತಿಯಲ್ಲಿ ನಿಮಗೂ ತಿಳಿಸುತ್ತೇನೆ. ಇದೊಂದು ತಮಾಷೆಯಾಗಿತ್ತು ಎಂದು ಶಂಸಿ ಸ್ಪಷ್ಟಪಡಿಸಿದ್ದಾರೆ.