ಗುವಾಹಟಿ: ಆರಂಭಿಕ ಅಭಿಷೇಕ್ ಶರ್ಮಾ (ಅಜೇಯ 68) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (ಅಜೇಯ 57) ಇವರುಗಳ ಭರ್ಜರಿ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ಮೂರನೇ ಟಿ20 ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ನ್ಯೂಜಿಲೆಂಡ್ ಮಹತ್ವದ ಪಂದ್ಯದಲ್ಲಿ ಮತ್ತೊಂದು ಸೋಲು ಕಂಡಿದೆ. ಸೂರ್ಯಕುಮಾರ್ ಪಡೆ ಸತತ 13ನೇ ದ್ವಿಪಕ್ಷೀಯ ಸರಣಿ ಗೆಲುವಿನ ನಗೆ ಬೀರಿದೆ.
154 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಸಂಜು ಸ್ಯಾಮ್ಸನ್ ಮ್ಯಾಟ್ ಹೆನ್ರಿ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿ ಬೋಲ್ಡ್ ಆದರು. ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರಿಗೆ ಸಾಥ್ ನೀಡಿದ ಇಶಾನ್ ಕಿಶನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 19 ಎಸೆತಗಳಲ್ಲಿ 53 ರನ್ ಸಿಡಿಸಿತು. ಈ ವೇಳೆ ಇಶಾನ್ ಕಿಶನ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 28 ರನ್ ಬಾರಿಸಿ ಇಶ್ ಸೋಧಿಗೆ ವಿಕೆಟ್ ಒಪ್ಪಿಸಿದರು.

53 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಆರಂಭಿಕ ಅಭಿಷೇಕ್ ಶರ್ಮಾ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆರಂಭದಿಂದಲೂ ಪವರ್ ಫುಲ್ ಆಟವನ್ನು ಆಡಿತು. ಈ ಜೋಡಿ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿತು. ಅಭಿಷೇಕ್, ಸೂರ್ಯ 3ನೇ ವಿಕೆಟ್‌ಗೆ 40 ಎಸೆತಗಳಲ್ಲಿ ಅಜೇಯ 102 ರನ್ ಸೇರಿಸಿತು. ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನಡೆಸಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದರು. ಇವರು 26 ಎಸೆತಗಳಲ್ಲಿ 6 ಬೌಂಡರಿ, 3 ಬೌಂಡರಿ ನೆರವಿನಿಂದ ಅಜೇಯ 57 ರನ್ ಸಿಡಿಸಿದರು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದರು. ಇವರು ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿ ಆರ್ಭಟಿಸಿದರು. ಇವರು ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಅಲ್ಲದೆ ಕೇವಲ 20 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 68 ರನ್ ಬಾರಿಸಿದರು. ಅಂತಿಮವಾಗಿ ಭಾರತ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್ ಸಿಡಿಸಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು 3-0ಯಿಂದ ಗೆದ್ದು ಬೀಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳು ನೆಲಕಚ್ಚಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಫಿಲಿಪ್ಸ್ ಹಾಗೂ ಮಾರ್ಕ್ ಚಾಂಪಮನ್ (32) ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟವನ್ನು ನೀಡಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗ್ಲೆನ್ ಫಿಲಿಪ್ಸ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 48 ರನ್ ಸಿಡಿಸಿದರು. ನಾಯಕ ಮಿಚೆಲ್ ಸ್ಯಾಂಟ್ನರ್ 27 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಸೇರಿಸಿತು.
ಟೀಮ್ ಇಂಡಿಯಾದ ಪರ ಜಸ್ಪ್ರೀತ್ ಬುಮ್ರಾ 3, ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಉರುಳಿಸಿದರು.