ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಈಗಾಗಲೇ ಐಸಿಸಿ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಎಲ್ಲಾ 10 ತಂಡಗಳು ಸಿದ್ಧತೆ ಆರಂಭಿಸಿವೆ.
ಇನ್ನು ವೇಳಾಪಟ್ಟಿ ಪ್ರಕಾರ, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದರೆ, ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯವನ್ನು ಆಡಲಿದೆ.
ಭಾರತ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದರಿಂದ, ಟ್ರೋಫಿ ಎತ್ತುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಇದೀಗ ಭಾರತ ತಂಡದ ಮಾಜಿ ನಾಯಕ ಮತ್ತು ಭಾರತಕ್ಕೆ ವಿಶ್ವಕಪ್ ಜಯಿಸಿಕೊಟ್ಟ ಮೊದಲ ನಾಯಕ ಕಪಿಲ್ ದೇವ್ ಅವರು ಭಾರತದ ಅವಕಾಶಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲ ಕಡೆಯಿಂದ ಬರುತ್ತಿರುವ ನಿರೀಕ್ಷೆಗಳ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ತಂಡಕ್ಕೆ ಕೆಲವು ಸಲಹೆ ನೀಡಿದ್ದಾರೆ.
ಎರಡು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದೆ. ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನಲ್ಲಿ ಚಾಲನೆ ನೀಡಿ ಮಾತನಾಡಿದ ಕಪಿಲ್ ದೇವ್, ಐಸಿಸಿ ಟೂರ್ನಿಯಲ್ಲಿ ಭಾರತವನ್ನು ದೊಡ್ಡ ಫೇವರಿಟ್ ಎಂದು ಪರಿಗಣಿಸಲಾಗಿದೆ.
ಹೆಚ್ಚಿನ ನಿರೀಕ್ಷೆಗಳನ್ನು ಭಾರತ ತಂಡವು ಹೇಗೆ ಎದುರಿಸುತ್ತದೆ ಎಂಬುದು ಅಂತಿಮ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ಮಾಜಿ ನಾಯಕ ಕಪಿಲ್ ದೇವ್ ಹೇಳಿದರು. 2011ರಲ್ಲಿ ನಡೆದ ಹಿಂದಿನ ವಿಶ್ವಕಪ್ ಗೆಲುವನ್ನು ಉಲ್ಲೇಖಿಸಿದ ಕಪಿಲ್ ದೇವ್, ತಂಡದ ಅವಕಾಶಗಳ ಬಗ್ಗೆ ನನಗೆ ವಿಶ್ವಾಸವಿದೆ ಎಂದು ತಿಳಿಸಿದರು.
"ಎಲ್ಲ ಕಡೆಯ ನಿರೀಕ್ಷೆಗಳೊಂದಿಗೆ ಭಾರತ ತಂಡ ಹೇಗೆ ಹೊಂದಾಣಿಕೆಯಾಗುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಧರಿತವಾಗಲಿದೆ. ನಾವು ತವರಿನಲ್ಲಿ ವಿಶ್ವಕಪ್ ಗೆದ್ದಿದ್ದೇವೆ ಮತ್ತು ತಂಡವು ಯಾರನ್ನೇ ಆಯ್ಕೆ ಮಾಡಿದರೂ ಗೆಲ್ಲುತ್ತಾರೆ ಎಂದು ನನಗೆ ಖಾತ್ರಿಯಿದೆ. ಮತ್ತೆ ನಾಲ್ಕು ವರ್ಷಗಳಲ್ಲಿ ವಿಶ್ವಕಪ್ ಬರಲಿದೆ ಮತ್ತು ಯುವ ಆಟಗಾರರು ಸಂಪೂರ್ಣವಾಗಿ ಸಿದ್ಧರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.
1983ರ ವಿಶ್ವಕಪ್ ಜಯಿಸಿದ ಭಾರತ ತಂಡದ ಫಿಟ್ ಆಟಗಾರರಲ್ಲಿ ಕಪಿಲ್ ದೇವ್ ಒಬ್ಬರಾಗಿದ್ದರು. 131 ಟೆಸ್ಟ್ ಪಂದ್ಯಗಳು ಮತ್ತು 225 ಏಕದಿನ ಪಂದ್ಯಗಳನ್ನು ಆಡಿರುವ ವೃತ್ತಿಜೀವನದಲ್ಲಿ, ಕಪಿಲ್ ದೇವ್ ಅವರು ದೀರ್ಘಕಾಲದವರೆಗೆ ಯಾವುದೇ ಗಾಯಗಳಿಂದ ದೂರವಿರಲಿಲ್ಲ. ಆದರೆ, ವಿಶ್ರಾಂತಿರಹಿತ ವೇಳಾಪಟ್ಟಿಯ ಕಾರಣದಿಂದಾಗಿ ಈಗಿನ ಕ್ರಿಕೆಟಿಗರು ಆಗಾಗ್ಗೆ ಗಾಯಗಳನ್ನು ಎದುರಿಸುತ್ತಿದ್ದಾರೆ.
ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಸುಮಾರು ಒಂದು ವರ್ಷದಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆ ಇದೆ. ಪ್ರಸ್ತುತ ದಿನಗಳಲ್ಲಿ ಆಟದ ಹೊರೆ, ಗಾಯ ನಿರ್ವಹಣೆಯ ಪ್ರಾಮುಖ್ಯತೆ ಮತ್ತು ಆಟಗಾರರು ವೈಯಕ್ತಿಕ ಫಿಟ್ನೆಸ್ ಬಗ್ಗೆ ಗಮನ ಹರಿಸುವುದರ ಬಗ್ಗೆ ಕಪಿಲ್ ದೇವ್ ಒತ್ತಿ ಹೇಳಿದರು.
"ನಾವು ಇಷ್ಟೊಂದು ಕ್ರಿಕೆಟ್ ಆಡದೇ ಇದ್ದಿದ್ದರಿಂದ ನಮ್ಮ ಕಾಲ ಬೇರೆಯಾಗಿತ್ತು. ಈಗಿನ ಆಟಗಾರರು ಸುಮಾರು 10 ತಿಂಗಳ ಕಾಲ ನಿರಂತರ ಕ್ರಿಕೆಟ್ ಆಡುತ್ತಿದ್ದಾರೆ. ಆದ್ದರಿಂದ, ಗಾಯದಿಂದ ದೂರವಿರಲು ನಿಮ್ಮ ದೇಹವನ್ನು ನಿರ್ವಹಿಸುವುದು ಮುಖ್ಯವಾಗಿದೆ. ಪ್ರತಿಯೊಬ್ಬರ ದೇಹವು ವಿಭಿನ್ನವಾಗಿದೆ, ಅವರ ಫಿಟ್‌ನೆಸ್ ಕಾಪಾಡಿಕೊಳ್ಳಲು ಅವರಿಗೆ ವೈಯಕ್ತಿಕ ಯೋಜನೆಗಳ ಅಗತ್ಯವಿರುತ್ತದೆ," ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ತಿಳಿಸಿದರು.